ಉಡುಪಿ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸಂವೇದನಾಶೀಲ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಹಂಚಿಕೊಂಡ ಪ್ರಕರಣ ಪತ್ತೆಯಾಗಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 128/2025ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ಸಂಸ್ಥೆ ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ M/S Shushma Marine Pvt. Ltd. ಸಂಸ್ಥೆಯ ಸಬ್‌ಕಾಂಟ್ರಾಕ್ಟ್ ಮೂಲಕ ಕೆಲಸ ಮಾಡುತ್ತಿದ್ದ ರೋಹಿತ್ (29), ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ನಿವಾಸಿಯಾಗಿದ್ದು, ಇನ್ಸುಲೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದನು.
ಕರ್ನಾಟಕಕ್ಕೆ ಬರುವ ಮೊದಲು ರೋಹಿತ್ ಕೇರಳದ ಕೊಚ್ಚಿಯಲ್ಲಿ ಶುಶ್ರೂಷೆ ಸಲ್ಲಿಸುತ್ತಿದ್ದಾಗ ಭಾರತೀಯ ನೌಕಾಸೇನೆಯ ಹಡಗುಗಳ ವಿವರಗಳು, ಸಂಖ್ಯೆ ಪಟ್ಟಿ ಸೇರಿದಂತೆ ಹಲವು ಗೌಪ್ಯ ಮಾಹಿತಿಯನ್ನು ವಾಟ್ಸಪ್ ಮೂಲಕ ಅನಧಿಕೃತ ವ್ಯಕ್ತಿಗೆ ಹಂಚಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಮೂಲಕ ಆತ ಅಕ್ರಮ ಲಾಭ ಗಳಿಸಿದ್ದಾನೆ ಎನ್ನಲಾಗಿದೆ.
ಮಲ್ಪೆಗೆ ಬಂದ ನಂತರವೂ ಆತನ ಸ್ನೇಹಿತರಿಂದ ಪಡೆದುಕೊಂಡ ಸಂವೇದನಾಶೀಲ ಮಾಹಿತಿಯನ್ನು ವಾಟ್ಸಪ್ ಮೂಲಕ ಮತ್ತೊಮ್ಮೆ ಹೊರಗುಳಿಸಿದ ಆರೋಪ ವ್ಯಕ್ತವಾಗಿದೆ. ಈ ಮೂಲಕ ಭಾರತದ ಸಾರ್ವಭೌಮತೆ, ಏಕತೆ, ಅಖಂಡತೆ ಮತ್ತು ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಇಓ ನೀಡಿದ ದೂರು ಮೇರೆಗೆ ಕಲಂ 152 BNS ಹಾಗೂ ಕಲಂ 3, 5 – OFFICIAL SECRETS ACT, 1923ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಹರ್ಷ ಪ್ರಿಯಂವದಾ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಮಲ್ಪೆಯ ಪೊಲೀಸ್ ಉಪನಿರೀಕ್ಷಕರಾದ ಅನೀಲ್ ಕುಮಾರ್ ಡಿ, ಎಎಸ್‌ಐ ಹರೀಶ್, ಪಿಸಿ ರವಿ ಜಾಧವ್ ಇವರ ತಂಡ ನಡೆಸಿತು.

ತನಿಖೆಯಲ್ಲಿ ರೋಹಿತ್ (29) ಹಾಗೂ ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಸಂತ್ರೀ (37) ಎಂಬ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಇಬ್ಬರನ್ನೂ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 03, 2025ರವರೆಗೆ ನ್ಯಾಯಾಂಗ ಬಂಧನಕ್ಕೆ ತೀರ್ಪು ನೀಡಲಾಗಿದೆ.
ಈ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರ ಭದ್ರತೆಗೆ ಸಂಬಂಧಿಸಿದ ಗಂಭೀರ ಅಂಶಗಳನ್ನು ಒಳಗೊಂಡಿರುವುದರಿಂದ ಗಮನ ಸೆಳೆದಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ




