ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (SCDCC) ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ, ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಂಸ್ಥೆಯು ‘ಅತ್ಯುತ್ತಮ ಪತ್ತಿನ ಸಹಕಾರಿ ಸಂಘ’ ಪ್ರಶಸ್ತಿಗೆ ಭಾಜನವಾಗಿದೆ.
ನವೆಂಬರ್ 16 ರಂದು ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲೆಯಿಂದ ಉತ್ತಮ ಪತ್ತಿನ ಸಹಕಾರಿ ಸಂಘಗಳ ಪೈಕಿ ರೋಜರಿ ಕ್ರೆಡಿಟ್ ಸೊಸೈಟಿಯನ್ನು ಆಯ್ಕೆ ಮಾಡಲಾಗಿತ್ತು.
🌟 ಸಹಕಾರ ಕ್ಷೇತ್ರದ ಮಹತ್ವ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸತತವಾಗಿ ಗ್ರಾಹಕರಿಗೆ ಉತ್ತಮ ಸೇವೆ, ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಬದ್ಧತೆಯನ್ನು ಕಾಪಾಡಿಕೊಂಡು ಬಂದಿರುವ ರೋಜರಿ ಕ್ರೆಡಿಟ್ ಸೊಸೈಟಿಯ ಸಾಧನೆಯು ಕುಂದಾಪುರ ತಾಲೂಕಿನ ಸಹಕಾರ ಕ್ಷೇತ್ರಕ್ಕೆ ಹೆಮ್ಮೆಯನ್ನು ತಂದಿದೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷರಾದ ಶ್ರೀ ಜಾನ್ಸನ್ ಡಿ ಅಲ್ಮೇಡಾ ಅವರು ಗಣ್ಯರಿಂದ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಫರೀದ್, ಸಹಕಾರ ಮಹಾಮಂಡಲದ ಅಧ್ಯಕ್ಷರು , ಶಾಸಕರಾದ ಶ್ರೀ ಜಿ ಟಿ ದೇವೇಗೌಡ , ವಿಧಾನಪರಿಷತ್ ಸದಸ್ಯ ಶ್ರೀ ಮಂಜುನಾಥ ಭಂಡಾರಿ , ಶ್ರೀ ಐವನ್ ಡಿಸೋಜ, ಶಾಸಕರಾದ ಶ್ರೀ ವೇದವ್ಯಾಸ ಡಿ ಕಾಮತ್, ಶ್ರೀ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶ್ರೀ ಬಿ ಜಯಕರ್ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ನಿಬಂಧಕರಾದ ಶ್ರೀ ಟಿ ಹೆಚ್ ಎಂ ಕುಮಾರ್, ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ ಆರ್, ಶ್ರೀ ರಮೇಶ್ ಹೆಚ್ ಎನ್ ಮೊದಲಾದ ಸಹಕಾರ ಧುರೀಣರು ಉಪಸ್ಥಿತರಿದ್ದರು
👥 ಪ್ರಮುಖರ ಅಭಿನಂದನೆ
ಸೊಸೈಟಿಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ವರ್ಗವು ಈ ಪ್ರಶಸ್ತಿಗೆ ಸಂತೋಷ ವ್ಯಕ್ತಪಡಿಸಿದ್ದು, ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಿದ ಎಲ್ಲ ಗ್ರಾಹಕರು ಮತ್ತು ಷೇರುದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿಯು ಸೊಸೈಟಿಯ ಮುಂದಿನ ಕಾರ್ಯನಿರ್ವಹಣೆಗೆ ಮತ್ತಷ್ಟು ಸ್ಪೂರ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಸೊಸೈಟಿಯ ಸಾಧನೆ:
ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಕಳೆದ 33 ಹೆಚ್ಚು ವರ್ಷಗಳಿಂದ ಕುಂದಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ ಸದಸ್ಯರಿಗೆ ಆರ್ಥಿಕ ಭದ್ರತೆ ಮತ್ತು ನೆರವನ್ನು ನೀಡುತ್ತಿದೆ. ಇತ್ತೀಚಿಗೆ ಈ ಸೊಸೈಟಿಯು ರೂಪಾಯಿ ಒಂದು ಸಾವಿರ ಕೋಟಿ ವಹಿವಾಟಿನ ಮೈಲಿಗಲ್ಲನ್ನು ದಾಟುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ತನ್ನ ಬೃಹತ್ ಹೆಜ್ಜೆಯನ್ನು ಪ್ರದರ್ಶಿಸಿತ್ತು. ಈ ಪ್ರಶಸ್ತಿಯು ಉಡುಪಿ ಜಿಲ್ಲೆಯ ಸಹಕಾರ ಕ್ಷೇತ್ರದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







