ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕ ದ್ರವ್ಯ ನಿಯಂತ್ರಣ ಘಟಕದ ಸಮನ್ವಯದಲ್ಲಿ ಕೆ.ಆರ್. ಪುರಂ ಪೊಲೀಸರು ₹ 24 ಕೋಟಿ ಮೌಲ್ಯದ 12 ಕೆಜಿ ನಿಷೇಧಿತ ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ನೈಜೀರಿಯಾ ಮೂಲದ 40 ವರ್ಷದ ವಿದೇಶಿ ಮಹಿಳೆಯನ್ನು ಬಂಧಿಸಿದ್ದಾರೆ.
ಟಿಸಿ ಪಾಳ್ಯ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರು 12 ಕೆಜಿ ಎಂಡಿಎಂಎ, ಮೊಬೈಲ್ ಫೋನ್ ಮತ್ತು 70 ಏರ್ ಟೆಲ್ ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಿದ್ದಾರೆ. ಮಹಿಳೆ ನಗರದಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಳು ಎನ್ನಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯು ಬೆಂಗಳೂರಿನಲ್ಲಿ ಮಾದಕ ದ್ರವ್ಯ ಸಾಗಾಟವನ್ನು ತಡೆಯುವಲ್ಲಿ ಮಹತ್ವದ ಹೆಜ್ಜೆಯಾಗಿದೆ.