ಕೆ.ಆರ್. ಪುರ ಪೊಲೀಸ್ ಠಾಣಾ ಸರಹದ್ದಿನ ಭಟ್ಟರಹಳ್ಳಿ ಆರ್.ಎಂ.ಎಸ್ ಕಾಲೋನಿಯ ಜ್ಯುವೆಲೆರಿ ಅಂಗಡಿಯೊಂದರಲ್ಲಿ ದಿನಾಂಕ:27/01/2024 ರಂದು ಮಧ್ಯಾಹ್ನ ಚಿನ್ನಾಭರಣಗಳ ಹಾಲ್ ಮಾರ್ಕ್ ಪರಿಶೀಲನೆ ಮಾಡುವ ಚೆನ್ನೈ ಬ್ರಾಂಚ್ ಬ್ಯೂರೊ ಆಫ್ ಸ್ಟಾಂಡರ್ಸ್ ಅಧಿಕಾರಿಗಳೆಂದು ಹೇಳಿಕೊಂಡಿರುತ್ತಾರೆ. ನಂತರ ಅಂಗಡಿಯಲ್ಲಿದ್ದ ಕೆಲಸಗಾರರನ್ನು ಹೆದರಿಸಿ 35 ಲಕ್ಷ ಬೆಲೆ ಬಾಳುವ 1 ಕೆ.ಜಿ 248 ಗ್ರಾಂ ತೂಕದ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಗುರುತು ಪತ್ತೆಯಾಗಬಾರದೆಂದು ಸಾಕ್ಷಿಯನ್ನು ನಾಶಪಡಿಸುವ ಉದ್ದೇಶದಿಂದ, ಅದೇ ಜ್ಯುವೆಲೆರಿ ಅಂಗಡಿಯಲ್ಲಿ ಅಳವಡಿಸಿದ್ದ ಡಿ.ಎ.ಆರ್ ಸಿಸ್ಟಮ್‌ನ್ನು ತೆಗೆದುಕೊಂಡು ಹೋಗಿರುತ್ತಾರೆ. ಅವರು ಬಳಸಿದ ಇನೋವಾ ಕ್ರಿಸ್ಟಾ ಕಾರ್‌ಗೆ ನಕಲಿ ನೊಂದಣಿ ಸಂಖ್ಯೆ ಅಳವಡಿಸಿಕೊಂಡಿದ್ದರು. ಜ್ಯುವೆಲೆರಿ ಅಂಗಡಿ ಕೆಲಸಗಾರನೊಬ್ಬ ಇನೋವಾ ಕ್ರಿಸ್ಟಾ ಕಾರ್‌ನ್ನು ಹಿಂಬಾಲಿಸಿ ನಿಲ್ಲಿಸುವಂತೆ ಸೂಚಿಸಿದಾಗ ಆತನ ಮೇಲೆಯೇ ಕಾರನ್ನು ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿದ 5 ಜನ ವ್ಯಕ್ತಿಗಳ ವಿರುದ್ಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿರುತ್ತದೆ.
ತನಿಖೆ ಆರಂಭಿಸಿದ ಕೆ.ಆರ್.ಪುರ ಪೊಲೀಸ್ ತಂಡ ದರೋಡೆ ಮತ್ತು ಕೊಲೆ ಪಯತ್ನ ಕೃತ್ಯ ಎಸಗಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ವ್ಯಕ್ತಿಗಳನ್ನು ಕೃತ್ಯ ನಡೆದ ಕೇವಲ 2 ಗಂಟೆಯ ಅವಧಿಯಲ್ಲಿಯೇ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ 04 ಜನರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರುಗಳಿಂದ 1 ಕೆ.ಜಿ 248 ಗ್ರಾಂ ತೂಕದ ೯ 85 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ಜ್ಯುವೆಲೆರಿ ಅಂಗಡಿಯ ಡಿ.ಎ.ಆರ್‌ನ್ನು ಹಾಗು ಕೃತ್ಯಕ್ಕೆ ಬಳಸಿದ ಇನೋವಾ ಕ್ರಿಸ್ಟಾ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಮತ್ತೊಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಶಿವಕುಮಾರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀಮತಿ. ಪ್ರಿಯದರ್ಶಿನಿ ಈಶ್ವರ್ ಸಾಣೇಕೊಪ್ಪ ಸಹಾಯಕ ಪೊಲೀಸ್ ಆಯುಕ್ತರು ವೈಟ್ ಫೀಲ್ಡ್ ಉಪ ವಿಭಾಗರವರ ನೇತೃತ್ವದಲ್ಲಿ, ಕೆ.ಆರ್. ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.