ಬೆಂಗಳೂರು ನಗರದ ಪಶ್ಚಿಮ ವಿಭಾಗದ ಕಾಟನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಆಂಧ್ರಪ್ರದೇಶ ರಾಜ್ಯದಿಂದ ರೈಲಿನಲ್ಲಿ ತಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಸುಮಾರು 10,00,000/- ರೂ ಬೆಲೆಬಾಳುವ 20 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿರುತ್ತಾರೆ.
ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣದಲ್ಲಿ ದಸ್ತಗಿರಿ ಪಡಿಸಿದ ಆರೋಪಿಯು ಆಂಧ್ರಪ್ರದೇಶ ಮೂಲದ ಅಪರಿಚಿತ ವ್ಯಕ್ತಿಯೊಬ್ಬ ಆಂಧ್ರಪ್ರದೇಶದಿಂದ ರೈಲಿನಲ್ಲಿ ಆಗ್ಗಾಗ್ಗೆ ಗಾಂಜಾ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿರುತ್ತಾನೆ. ಸದರಿ ಮಾಹಿತಿಯನ್ನು ಆಧರಿಸಿ ಗುಮಾನಿ ಆಸಾಮಿಗಳ ಚಲನವಲನಗಳ ಮೇಲೆ ನಿಗಾವಹಿಸಿ ಆತನು ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ದಿನಾಂಕ:-24-06-2023 ರಂದು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಗಾಂಜಾವನ್ನು ರೈಲಿನಲ್ಲಿ ತೆಗೆದುಕೊಂಡು ಬರುತ್ತಿರುವ ಮಾಹಿತಿ ಸಂಗ್ರಹಿಸಿ, ರೈಲ್ವೇ ನಿಲ್ದಾಣದ ಸುತ್ತಮುತ್ತ ನಿಗಾವಹಿಸಿದ್ದು, ನಂತರ ಖಚಿತ ಮಾಹಿತಿ ಮೇರೆಗೆ, ಸದರಿ ಆಸಾಮಿಯು ಮಾರಾಟ ಮಾಡುವ ಸಲುವಾಗಿ ಗಾಂಜಾವನ್ನು ಬೇರೆಡೆಗೆ ಸಾಗಿಸಲು ರೈಲ್ವೇ ಬ್ಯಾಕ್ ಗೇಟ್, ರಸ್ತೆಯಲ್ಲಿ ನಿಂತಿರುವಾಗ್ಗೆ ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಆರೋಪಿ ಆಸಾಮಿಯನ್ನು ವಿಚಾರಣೆ ಮಾಡಲಾಗಿ ತಾನು, ಅರಕು ವ್ಯಾಲಿ ತಾಲ್ಲೂಕ್, ವಿಶಾಖ ಪಟ್ಟಣಂ, ಆಂಧ್ರಪ್ರದೇಶ ರಾಜ್ಯ ಎಂದು ತಿಳಿಸಿದ್ದು, ತನ್ನೊಂದಿಗೆ ಗಾಂಜಾವನ್ನು ಮಾರಾಟ ಮಾಡಲು ತಂದಿರುವುದಾಗಿ ಒಪ್ಪಿಕೊಂಡ ಮೇರೆಗೆ, ಆರೋಪಿಯ ವಶದಲ್ಲಿದ್ದ ಸುಮಾರು 10,00,000/-ರೂ ಮೌಲ್ಯದ 20 ಕೆ.ಜಿ ಮಾದಕ ವಸ್ತು ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.
ಈ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಕಾರ್ಯಾಚರಣೆಗೆ ಶ್ರೀ ಲಕ್ಷ್ಮಣ ಬ ನಿಂಬರಗಿ ಐಪಿಎಸ್, ಉಪ ಪೊಲೀಸ್ ಆಯುಕ್ತರು ಪಶ್ಚಿಮ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಕೆ.ಸಿ ಗಿರಿ, ಸಹಾಯಕ ಪೊಲೀಸ್ ಆಯುಕ್ತರು ಚಿಕ್ಕಪೇಟೆ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಲರಾಜ್ ಜಿ, ಪೊಲೀಸ್ ಇನ್ಸ್ಪೆಕ್ಟರ್ ಕಾಟನ್ ಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯರವರನ್ನೊಳಗೊಂಡ ತಂಡ ರಚಿಸಿದ್ದು, ಸದರಿ ತಂಡವು ಉತ್ತಮ ಕಾರ್ಯನಿರ್ವಹಿಸಿ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಮೇಲೆ ತಿಳಿಸಿದ ಅಧಿಕಾರಿ/ ಸಿಬ್ಬಂದಿಯವರ ಉತ್ತಮ ಕಾರ್ಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ರವರು ಶ್ಲಾಘಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು