ರಾಜ್ಯ ಪೊಲೀಸ್ ಪೊಲೀಸ್ ಮಹಾ ನಿರ್ದೇಶಕ(ಡಿಜಿ-ಐಜಿಪಿ) ರಾಗಿ ಡಾ.ಅಲೋಕ್ ಮೋಹನ್ ಅವರು ಇಂದು ಅಧಿಕಾರ ವಹಿಸಿಕೊಂಡರು.
ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿರುವ ಅಲೋಕ್ ಮೋಹನ್? ಅವರು ಹೆಚ್ಚುವರಿಯಾಗಿ ಡಿಜಿ-ಐಜಿಪಿಯಾಗಿ ಅಧಿಕಾರವನ್ನು ಸಿಬಿಐ ನಿರ್ದೇಶಕರಾಗಿ ಕೇಂದ್ರ ಸೇವೆಗೆ ತೆರಳುತ್ತಿರುವ ಪ್ರವೀಣ್ ಸೂದ್ ಅವರಿಂದ ವಹಿಸಿಕೊಂಡರು.
ಸೇವಾ ಹಿರಿತನದ ಆಧಾರದ ಮೇಲೆ ೮೭ನೇ ಬ್ಯಾಚ್‌ನ ಅಧಿಕಾರಿ ಹಾಗೂ ಪ್ರಸ್ತುತ ರಾಜ್ಯ ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕದಳದ ಮುಖ್ಯಸ್ಥರಾಗಿರುವ ಅಲೋಕ್ ಮೋಹನ್ ಅವರನ್ನು ಮುಂದಿನ ರಾಜ್ಯ ಪೊಲೀಸ್ ಡಿಜಿ ಮತ್ತು ಐಜಿಪಿಯಾಗಿ ರಾಜ್ಯ ಸರ್ಕಾರ ಹೆಚ್ಚುವರಿ ಹೊಣೆ ನೀಡಿದೆ.
ಮೂರ್ನಾಲ್ಕು ದಿನಗಳ ಬಳಿಕ ಡಿಜಿ-ಐಜಿಪಿಯಾಗುವ ರಾಜ್ಯದ ಐವರು ಅಧಿಕಾರಿಗಳ ಹೆಸರನ್ನು ಯುಪಿಎಸ್ ಸಿಗೆ ಕಳುಹಿಸಿ ಅಲೋಕ್ ಮೋಹನ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ.
ಅಲ್ಲಿಂದ ಅಲೋಕ್ ಮೋಹನ್ ಅವರು ರಾಜ್ಯದ ಡಿಜಿ-ಐಜಿಪಿ ಹುದ್ದೆಯನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದ್ದು ಅವರ ಸೇವಾವಧಿಯು ಇನ್ನೂ ಎರಡು ವರ್ಷಗಳ ಕಾಲ ಇರಲಿದೆ.
ಬಿಹಾರ ರಾಜ್ಯದ ಪಾಟ್ನಾ ಮೂಲದವರಾದ ಡಾ.ಅಲೋಕ್ ಮೋಹನ್, ೧೯೬೫ ರ ಏಪ್ರಿಲ್ ೧೮ರಂದು ಜನಿಸಿದರು. ಉತ್ತರಾಖಂಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್‌ಸಿ, ಭಾರತೀಯ ಆಂತರಿಕಾ ಭದ್ರತೆ ಬಗ್ಗೆ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಕರ್ನಾಟಕದ ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಲೋಕ್ ಮೋಹನ್, ಸಿಐಡಿ ಡಿಜಿಪಿ, ಬೆಂಗಳೂರು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ, ಬಳಿಕ ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎಡಿಜಿಪಿ ಆಡಳಿತ ಹಾಗೂ ಕಾರಾಗೃಹ ಮತ್ತು ಅಗ್ನಿಶಾಮಕ ದಳ ಡಿಜಿಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಈಗ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.