ವಿಧಾನಸಭಾ ಚುನಾವಣೆ ನಡುವೆಯೇ ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು ಭ್ರಷ್ಟರ ಬಂಡವಾಳ ಬಯಲಿಗೆಳೆದಿದೆ. ವಿಶೇಷವೆಂದರೆ, ನಿವೃತ್ತರಾಗಿ ಬೆಚ್ಚಗಿದ್ದವರಿಗೂ ಶಾಕ್ ನೀಡಿದೆ.
ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಶಿವಮೊಗ್ಗ ,ಚಿತ್ರದುರ್ಗ ಸೇರಿದಂತೆ 8 ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಎಸ್‍ಪಿಗಳ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿರುವುದು ಸಂಚಲನ ಸೃಷ್ಠಿಸಿದೆ.
ಬೆಂಗಳೂರಿನ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ, ಎಇಇ ಟಿ.ಹನುಮಂತರಾಯ, ಬಸವಕಲ್ಯಾಣ ತಾಲೂಕಿನ ಮುಡಬಿಯ ಉಪತಹಶೀಲ್ದಾರ್ ವಿಜಯಕುಮಾರ್, ಬೀದರ್‍ನ ನೀರಾವರಿ ಇಲಾಖೆ ಇಇ ಸುರೇಶ್ ಮೇದಾ, ಕೊಲಾರದ ತಾಲೂಕು ಪಂಚಾಯ್ತಿ ಕಾರ್ಯಪಾಲಕ ಅಭಿಯಂತರ ವೆಂಕಟೇಶಪ್ಪ, ನಿವೃತ್ತ ಡಿಸಿಎಫ್ ನಾಗರಾಜ್ ನಿವಾಸ, ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ದಾಳಿ ನಡೆದಿದೆ.
ಬಿಬಿಎಂಪಿ ಟೌನ್‍ಪ್ಲಾನಿಂಗ್ ಎಂಜಿನಿಯರ್ ಗಂಗಾಧರಯ್ಯ ಅವರ ಯಲಹಂಕ, ಮಹಾಲಕ್ಷಿ ಲೇಔಟ್ ನಿವಾಸದ ಮೇಲೆ ಲೋಕಾಯುಕ್ತ ಎಸ್‍ಪಿ ಅಶೋಕ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಲೆ ಬಾಳುವ ವಸ್ತುಗಳು ರಾಜ್ಯದ ಹಲವೆಡೆ ಇರುವ ಕೃಷಿ ಜಮೀನು ಚಿನ್ನಾಭರಣ ಸೇರಿದಂತೆ ಕುಟುಂಬ ಸದಸ್ಯರ ಹೆಸರಿನಲ್ಲೂ ಹಲವು ಆಸ್ತಿ ಪತ್ತೆಯಾಗಿದೆ.
ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಅವರ ಶಿಕಾರಿಪುರದಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ಹಲವು ದಾಖಲೆಗಳು, ಅಪಾರ ಪ್ರಮಾಣದ ಚರ- ಸ್ಥಿರ ಆಸ್ತಿಗಳು ಪತ್ತೆಯಾಗಿದ್ದು, ಬೆಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.
ದಾವಣಗೆರೆಯಲ್ಲಿ ನಿವೃತ್ತ ಡಿಸಿಎಫ್ ನಾಗರಾಜ್ ಅವರ ಶಿವಮೊಗ್ಗದ ಮನೆ ಹಾಗೂ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ಸುಮಾರು ಏಳು ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ತಾಪಂ ಕಾರ್ಯಪಾಲಕ ಅಭಿಯಂತರ ವೆಂಕಟೇಶಪ್ಪಗೆ ಶಾಕ್ ನೀಡಿದ್ದಾರೆ. ಬಂಗಾರಪೇಟೆ ಪಟ್ಟಣದ ಮೂರು ಕಡೆ ಹಾಗೂ ಮುಳಬಾಗಿಲು ತಾಲೂಕಿನ ತಿಪ್ಪದೊಡ್ಡಿ ಗ್ರಾಮದ 2 ಕಡೆ ಲೋಕಾಯುಕ್ತ ಎಸ್‍ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.