ಇಂದು ಬೆಳಗ್ಗೆಯಿಂದಲೇ ನಗರದ ಹೃದಯ ಭಾಗದಲ್ಲಿನ ಉಪ್ಪಾರ ಪೇಟೆ ಸಂಚಾರ ಸರಹದ್ದಿನಲ್ಲಿ ಸಂಚಾರ ಪೊಲೀಸರು ಕರ್ತವ್ಯ ನಿರತರಾಗಿ ದೋಷ ಪೂರಿತ ನಂಬರ್ ಪ್ಲೇಟ್, ಸುರಕ್ಷತೆಗೆ ಆದ್ಯತೆ ನೀಡದೆ ಹೆಲ್ಮೆಟ್ ಧರಿಸದೆ ಸಂಚಾರಿಸುತ್ತಿದ್ದ, ದ್ವಿಚಕ್ರ ವಾಹನ ಚಾಲಕರ ಮೇಲೆ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಒನ್ ವೇಯಲ್ಲಿ ಯದ್ವ-ತದ್ವ ಚಾಲನೆ ಮಾಡುತ್ತಿದ್ದ ಚಾಲಕರ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಕೇಸ್ಗಳನ್ನು ಹಾಕಿ ಸಂಚಾರ ಉಲ್ಲಂಘನೆಗಳಿಂದ ಆಗುವ ಅಪಾಯಗಳನ್ನು ಮನ-ಮುಟ್ಟುವಂತೆ ತಿಳಿವಳಿಕೆ ನೀಡಿ ದಂಡ ವಸೂಲಿ ಮಾಡುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆ ಆದವು.
ಸಂಚಾರ ಸುರಕ್ಷತೆಯ ಬಗೆಯಲ್ಲಿ ವಾಹನ ಮಾಲೀಕರಿಗೆ ಮತ್ತು ಚಾಲಕರಿಗೆ ರಸ್ತೆ ಸುರಕ್ಷತಾ ತಿಳಿವಳಿಕೆ ಹೇಳಿದರು. ರಸ್ತೆ ಸುರಕ್ಷತಾ ಮಾರ್ಗಗಳನ್ನು ಮೈಗೂಡಿಸಿಕೊಳ್ಳದೆ ಸಂಚಾರ ಉಲ್ಲಂಘನೆ ಮಾಡುತ್ತಿರುವದರ ಬಗ್ಗೆ ಸಂಚಾರ ಪೊಲೀಸರು ತಮ್ಮ ತೀವ್ರ ಅಸಮಾಧಾನವನ್ನು ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಇಂದಿನ ಮಕ್ಕಳು ನಾಳೆಯ, ಭವ್ಯ ಭಾರತದ ಸತ್ಪ್ರಜೆಗಳು ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯದ ಹಿನ್ನೆಲೆಯಲ್ಲಿ ಶಾಲೆಗಳಿಗೆ ದುಬಾರಿ ಡೊನೇಷನ್ ಮತ್ತು ಶುಲ್ಕ ಕಟ್ಟಿ ಮಕ್ಕಳ ಜೀವ ರಕ್ಷಣೆಗೆ ದಿವ್ಯ ನಿರ್ಲಕ್ಷತೆ ತೋರುತ್ತಿರುವುದು ವಿಷಾದನೀಯ ಎಂದು ಹೇಳಿರುವ ಪೊಲೀಸರು, ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಲ್ಲಿ ಹೆಲ್ಮೆಟ್ ಧರಿಸದವರೇ ಹೆಚ್ಚೆಚ್ಚು ಸಾವಿಗೆ ಈಡಾಗಿದ್ದಾರೆ ಎಂದು ತಮ್ಮ ನೋವನ್ನು ತೋಡಿಕೊಂಡು ಕೇವಲ ಅಜಾಗರೂಕತೆಯಿಂದ ತಮ್ಮ ಅಮೂಲ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಪಾಲಿಸದೆ ಮತ್ತು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಸೂಕ್ತವಲ್ಲ ಎಂದು ಹೇಳಿದ ಪೊಲೀಸರು ಕಾಲೇಜುಗಳಲ್ಲಿ ಸಂಚಾರ ಸುರಕ್ಷತಾ ನಿಯಮ ಪಾಲಿಸುವಂತೆ ಹಾಗೂ ಕಟ್ಟುನಿಟ್ಟಾಗಿ ಐಎಸ್ಐ ಮುದ್ರಿತ ಉತ್ತಮ ದರ್ಜೆಯ ಹೆಲ್ಮೆಟ್ ಗಳನ್ನೇ ಧರಿಸುವಂತೆ ಜಾಗೃತಿ ಪಡಿಸುವುದು ಅನಿವಾರ್ಯವೆಂದು ಹೇಳಿದರು.
ಶಾಲೆಗಳಿಗೆ ಪೋಷಕರು ಭಾರಿ ಶುಲ್ಕ ತೆತ್ತು ತಮ್ಮ ಮಕ್ಕಳಿಗೆ ಹೆಲ್ಮೆಟ್ ಇಲ್ಲದೆ ಶಾಲಾ-ಕಾಲೇಜುಗಳಿಗೆ ಕರೆದುಕೊಂಡು ಹೋಗುತ್ತಿರುವುದು ತಿಳವಳಿಕೆಯ ಕೊರತೆ ಆಗಿದೆ ಎಂದರು.
ಲಕ್ಷಗಟ್ಟಲೆ ಹಣ ವೆಚ್ಚ ಮಾಡಿ ಮಕ್ಕಳ ಉದ್ಯೋನ್ಮುಖ ಭವಿಷ್ಯ ರೂಪಿಸುವ ಪೋಷಕರೇ, ತಾವು ಹೆಲ್ಮೆಟ್ ಧರಿಸದೆ, ತಮ್ಮ ಮಕ್ಕಳಿಗೂ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿರುವುದು ಅತ್ಯಂತ ಕೆಟ್ಟ ಅಭ್ಯಾಸವಾಗಿದೆ, ಮುಂದೆ ಈ ಕೆಟ್ಟ ಚಾಳಿ ಯುವಕರಲ್ಲಿ
ಮನೆ ಮಾಡುತ್ತದೆ ಎಂದಿರುವ ಪೊಲೀಸರು, ಪೋಷಕರು ಮಕ್ಕಳಿಗೆ ಶಿಸ್ತು-ಬದ್ಧತೆಯ ಸಂಸ್ಕಾರದ ಶಿಕ್ಷಣ ನೀಡದೆ ಹೋಗುತ್ತಿರುವುದು ಶೋಚನೀಯ ಎಂದಿರುವ ಪೊಲೀಸರು, ಇನ್ನು ಮುಂದಾದರೂ ಮಕ್ಕಳು ಸಂಚಾರ ನಿಯಮಗಳನ್ನು ಹಾಗೂ ಸುರಕ್ಷತೆಯನ್ನು ಮೈಗೂಡಿಸಿಕೊಳ್ಳುವಂತಹ ಶಿಸ್ತು ಹಾಗೂ ಉತ್ತಮ ರೀತಿಯ ಮಾರ್ಗದರ್ಶನವನ್ನು ನೀಡಬೇಕೆಂದು ಕರೆ ನೀಡಿ, ಮನವಿ ಮಾಡಿದ್ದಾರೆ.