ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಂತೆಯೇ ಕಾಣುವ ನಕಲಿ ವೆಬ್‌ಸೈಟ್ ರಚಿಸಿ, ಭಕ್ತರಿಂದ ರೂಮ್ ಬುಕಿಂಗ್ ಹೆಸರಿನಲ್ಲಿ ಹಣ ಪಡೆದು ನಕಲಿ ರಶೀದಿ ನೀಡಿ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಲ್ಲೂರು ಪೊಲೀಸರು ಆರೋಪಿ ಬಂಧಿಸಿದ್ದಾರೆ.
ಈ ಕುರಿತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರ ದೂರಿನ ಮೇರೆಗೆ ದಿನಾಂಕ 03/11/2025 ರಂದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2025, ಕಲಂ 318(2), 318(4) BNS ಹಾಗೂ 66(C), 66(D) ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಕ್ಕೆ ಸಂಬಂಧಿಸಿದ ಐಟಿ ಕಾಯ್ದೆಯ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ.ಬಿ ಹಾಗೂ ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ ಎ. ಕಾಯ್ಕಿಣಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಕೊಲ್ಲೂರು ಠಾಣೆಯ ಪಿಎಸ್‌ಐ ವಿನಯ ಎಂ. ಕೋರ್ಲಹಳ್ಳಿ, ಭೀಮ ಶಂಕರ ಸಿನ್ನೂರ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ತನಿಖೆಯ ವೇಳೆ ರಾಜಸ್ಥಾನ ರಾಜ್ಯದ ಆಲ್ವಾರ್ ಜಿಲ್ಲೆಯ ತಿಜಾರಾ ತಾಲೂಕಿನ ನಾಸೀರ್ ಹುಸೇನ್ (21) ಎಂಬಾತನು ಈ ಕೃತ್ಯ ನಡೆಸಿರುವುದು ದೃಢಪಟ್ಟಿದ್ದು, ದಿನಾಂಕ 19/12/2025 ರಂದು ಆತನನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಯಿಂದ ವಂಚನೆಗೆ ಬಳಸಿದ ಲ್ಯಾಪ್‌ಟಾಪ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ದಿನಾಂಕ 20/12/2025 ರಂದು ಆರೋಪಿಯನ್ನು ಮಾನ್ಯ ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







