ಮಲ್ಲೇಶ್ವರಂ ಪೊಲೀಸ್ ಠಾಣಾ ಸರಹದ್ದಿನ ಲಿಂಕ್ ರಸ್ತೆಯ ಸಿಗ್ನಲ್ ಬಳಿ ದಿನಾಂಕ 08-07-2023 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಿದ್ದು,
ಸದರಿ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೃತ ವ್ಯಕ್ತಿಯ ವಾರಸುದಾರರನ್ನು ಪತ್ತೆ ಮಾಡಿ, ಮೃತನ ಬಗ್ಗೆ
ಮಾಹಿತಿ ಕಲೆಹಾಕಿ, ಈ ಬಗ್ಗೆ ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೃತ ಮತ್ತು ಆರೋಪಿತನು ಕೆಲವು ತಿಂಗಳಿಂದ ಒಟ್ಟಾಗಿ ಮಲ್ಲೇಶ್ವರಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಿಂದಿ, ಪ್ಲಾಸ್ಟಿಕ್ ಸಂಗ್ರಹಿಸಿ ಒಟ್ಟಿಗೆ ಗುಜರಿ ಅಂಗಡಿಗೆ ನೀಡಿ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದು, ಅದರಂತೆ ದಿನಾಂಕ 08-07-2023 ರಂದು ಸಂಗ್ರಹಿಸಿದ ಚಿಂದಿಯನ್ನು ಅದೇ ದಿನ ಸಂಜೆ ಗುಜರಿ ಅಂಗಡಿಗೆ ಹಾಕಿದ್ದು, ಅದರಿಂದ ಬಂದ ಹಣವನ್ನು ಹಂಚಿಕೊಳ್ಳುವ ವಿಚಾರಕ್ಕೆ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡು ಜಗಳ ಅತಿರೇಕಕ್ಕೆ ಹೋಗಿ, ಆರೋಪಿಯು ಮೃತನಿಗೆ ರಸ್ತೆ ಬದಿಯಲ್ಲಿದ್ದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಶ್ರೀ ಶಿವ ಪ್ರಕಾಶ್ ದೇವರಾಜು, ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಪ್ರವೀಣ್ ಎಂ. ಸಹಾಯಕ ಪೊಲೀಸ್ ಆಯುಕ್ತರು, ಮಲ್ಲೇಶ್ವರಂ ಉಪ- ವಿಭಾಗ ಮತ್ತು ಶ್ರೀ. ಚಂದ್ರಶೇಖರ್ ಎಂ. ಪೊಲೀಸ್ ಇನ್ಸ್ ಪೆಕ್ಟರ್, ಮಲ್ಲೇಶ್ವರಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಹಾಗೂ ಸಿಬ್ಬಂದಿಯವರುಗಳು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಅಧಿಕಾರಿಗಳ ಮತ್ತು ಸಿಬ್ಬಂದಿಯವರುಗಳ ಕರ್ತವ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ. ಎನ್.ಸತೀಶ್ ಕುಮಾರ್ ರವರು ಪ್ರಶಂಸಿರುತ್ತಾರೆ.