ಪಿರಾದುದಾರರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಿನಾಂಕ:01/07/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ಒಂದು ಕಂಪನಿಯ ಮಾಲೀಕರಾಗಿದ್ದು, ದಿನಾಂಕ:28/06/2024 ರಿಂದ ದಿನಾಂಕ:30/06/2024 ರ ನಡುವೆ ಯಾರೋ ಅಪರಿಚಿತರು ಫಿರಾದುದಾರರ ಕಂಪನಿಯ ಕಛೇರಿ ಒಳಗಿನ ಎಲ್ಲಾ ಬಾಗಿಲುಗಳನ್ನು ಮುರಿದು, ಬೀರುಗಳ ಲಾಕ್‌ನ್ನು ಮುರಿದು, ಅಲ್ಲಿರುವ ಸಮಾರು 20 ಲ್ಯಾಪ್ ಟಾಪಗಳು, ಯುಪಿಎಸ್ ಇನ್ವೆಟರ್ ಬ್ಯಾಟರಿಗಳು, ವಾಷ್ ರೂಂ ಟ್ಯಾಪ್‌ಗಳು ಮತ್ತು ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಮಾಹಿತಿಯನ್ನು ಕಲೆಹಾಕಿ, ದಿನಾಂಕ:04/08/2024ರಂದು ಹಲಸೂರಿನ ಲಕ್ಷ್ಮೀಪುರದ ಹರಿಶ್ಚಂದ್ರ ಸ್ಮಶಾನದ ಬಳಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಮತ್ತಿಬ್ಬರು ವ್ಯಕ್ತಿಗಳು ಭಾಗಿಯಾಗಿರುವುದನ್ನು ತಿಳಿಸಿರುತ್ತಾರೆ. ಅದೇ ದಿನ ಮತ್ತಿಬ್ಬರು ವ್ಯಕ್ತಿಗಳನ್ನು ಅವರುಗಳ ವಾಸದ ಮನೆಯಿಂದ ವಶಕ್ಕೆ ಪಡೆದುಕೊಳ್ಳಲಾಯಿತು. ಅವರುಗಳನ್ನು ವಿಚಾರಣೆ ಮಾಡಲಾಗಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ದಿನಾಂಕ:05/08/2024 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ಈ ನಾಲ್ವರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ, ದಿನಾಂಕ:06/08/2024 ರಂದು ಹಲಸೂರಿನ ಲಕ್ಷ್ಮಿಪುರದ ಹರಿಶ್ಚಂದ್ರ ಸ್ಮಶಾನದ ಮಂಟಪದ ಬಳಿ ಒಂದು ದ್ವಿ-ಚಕ್ರ ವಾಹನ ಮತ್ತು ವಿವಿದ ಕಂಪನಿಯ 11 ಲ್ಯಾಪ್‌ಟಾಪ್‌ಗಳನ್ನು ಹಾಗೂ ದಿನಾಂಕ:08/08/2024 ರಂದು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಪುಟ್‌ಬಾತ್‌ನಲ್ಲಿರುವ ಟೀ ಅಂಗಡಿಯ ಮಾಲೀಕನ ಬಳಿ ಅಡಮಾನವಿಟ್ಟಿದ್ದ 24 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ ಕ 4,00,000/- (ನಾಲ್ಕು ಲಕ್ಷ ರೂಪಾಯಿ).
ದಿನಾಂಕ:09/08/2024 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಶಿವಕುಮಾರ್ ಗುಣಾರೇ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀಮತಿ.ರೀನಾ ಸುವರ್ಣ, ಸಹಾಯಕ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ಉಪ ವಿಭಾಗ ರವರ ನೇತೃತ್ವದಲ್ಲಿ, ಕಾಡುಗೋಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಹೆಚ್.ಎಂ.ರಂಗಸ್ವಾಮಿ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.