ಜನ ಮನಕ್ಕೆ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಬಟ್ಟೆ ಬರೆ ಇತರೆ ಸಾಮಗ್ರಿಗಳನ್ನು ಕೊಳ್ಳುವ ಸಡಗರ. ಹತ್ತಿರದ ಊರುಗಳಿಂದ ಲಗ್ಗೆ ಇಟ್ಟವರಿಗೇನು ಕಡಿಮೆಯೂ ಇರುವುದಿಲ್ಲ. ಅದರಲ್ಲಿಯೂ, ಹಬ್ಬ- ಹರಿದಿನಗಳು ಬಂತೆಂದರೆ ನಗರದ ಕೇಂದ್ರ ಪ್ರದೇಶವಾದ ಮೆಜೆಸ್ಟಿಕ್ ಪ್ರದೇಶ, ಬಿವಿಕೆ ಅಯ್ಯಂಗಾರ್ ರಸ್ತೆ, ಆಸ್ಪತ್ರೆ ರಸ್ತೆ, ಅವಿನ್ಯೂ ರಸ್ತೆ, ಚಿಕ್ಕಪೇಟೆ, ಬಳೆಪೇಟೆ ಹಾಗೂ ಕೆಆರ್ ಮಾರುಕಟ್ಟೆ ಪ್ರದೇಶಗಳು ಜನಸಾಗರದಿಂದ ತುಂಬಿರುತ್ತವೆ. ಹಬ್ಬದ ದಿನಗಳನ್ನು ಹೊರತುಪಡಿಸಿ ಶನಿವಾರ ಹಾಗೂ ರವಿವಾರದಂದು ಕಾರ್ಪೊರೇಷನ್ ಸರ್ಕಲ್ನಿಂದ ಮೆಜೆಸ್ಟಿಕ್ ಸರ್ಕಲ್ ಹಾಗೂ ಪೊತೀಸ್ ವೃತ್ತದ ಮಾರ್ಗವಾಗಿ ಚಿಕ್ಕಪೇಟೆ ಹಾಗೂ ಮಾರ್ಕೆಟ್ ಕಡೆ ಹಾದು ಹೋಗುವ ರಸ್ತೆಯಂತೂ ಜನ ಜಂಗುಳಿ ಹಾಗೂ ವಾಹನ ದಟ್ಟಣೆಯಿಂದ ಸುನಾಮಿಯಾಗಿ ಪರಿವರ್ತನೆಗೊಂಡು ವಾಹನಗಳು ಆಮೆ ನಡೆಗೆಯಿಂದ ಒಂದರ ಹಿಂದೆ ಒಂದರಂತೆ ಸಾಲುಗಟ್ಟಿ ನಿಧಾನ ಗತಿಯಿಂದ ಸಂಚರಿಸುವುದು ಕಂಡು ಬರುತ್ತದೆ.
ಕೆಂಪೇಗೌಡ ರಸ್ತೆಗೆ ಕೇಂದ್ರ ಬಿಂದು ವಾಗಿರುವ ಪೋತಿಸ್ ವೃತ್ತದಿಂದ ಬಿವಿಕೆ ಅಯ್ಯಂಗಾರ್ ರಸ್ತೆ ಮೂಲಕ ಸಿಟಿ ಮಾರುಕಟ್ಟೆ ಕಡೆಗೆ ಹೋಗುವ ವಾಹನಗಳು ಕಳೆದ ದಿನಗಳಿಗಿಂತಲೂ ದುಪ್ಪಟ್ಟಾಗಿದ್ದು ಸಂಚಾರ ಪೊಲೀಸರಿಗೆ ಸುಗಮ ವಾಹನ ಸಂಚಾರಕ್ಕೆ ಪಡುವ ಪ್ರಯತ್ನ ಅಪರಿಮಿತವಾಗಿರುತ್ತದೆ. ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ವಾಹನಗಳು ನಿಧಾನ ಗತಿಯಿಂದ ಚಲಿಸುವುದರಿಂದ ವಾಹನ ಸಂಚಾರ ದಟ್ಟಣೆಯಿಂದ ಸಾಕಷ್ಟು ಟ್ರಾಫಿಕ್ ಜಾಮ್ ಆಗುವುದುಂಟು.
ಶನಿವಾರ ಬಂತೆಂದರೆ ಉಪ್ಪಾರಪೇಟೆ ಸಂಚಾರ ಪೊಲೀಸರಿಗೆ ಬಿಸಿ ತುಪ್ಪವೇ ಸರಿ. ಬೆಳಿಗ್ಗೆ 10-12 ಗಂಟೆ ಸಮೀಪಿಸುತ್ತಿದ್ದಂತೆ ಏಕಾಏಕಿಯಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿ ಅವುಗಳನ್ನು ನಿಯಂತ್ರಿಸುವುದೇ ಪೊಲೀಸರಿಗೆ ತೀವ್ರ ಸಮಸ್ಯೆಯಾಗಿ ಕಾಡುತ್ತದೆ. ಇದರ ಮಧ್ಯೆ ಜನರು ಶಿಸ್ತು ಬದ್ಧವಾಗಿ ರಸ್ತೆ ದಾಟದೆ ಕುರಿಗಳಂತೆ ಯದ್ವಾ-ತದ್ವ ವಾಹನ ಸಂಚಾರದ ಮಧ್ಯೆಯು ನುಗ್ಗುವುದರಿಂದ ಪೊಲೀಸರಿಗೆ ಜನರನ್ನು ಅಪಾಯದಿಂದ ಪಾರು ಮಾಡುವುದೇ ಕಷ್ಟಕರವಾಗುತ್ತದೆ.
ಪೊಲೀಸರ ಕಿವಿ ಮಾತಿಗೂ ಕಿವಿ ಕೊಡದೆ ಮನ ಬಂದಂತೆ ರಸ್ತೆ ದಾಟುವ ಜನ ಜಂಗುಳಿಯನ್ನು ನಿಯಂತ್ರಿಸುವುದೇ ಪೊಲೀಸರಿಗೆ ಕ್ಲಿಷ್ಟ ಕೆಲಸವಾಗಿ ಬಸವಳಿಯ ಬೇಕಾಗುತ್ತದೆ. ಅದರಲ್ಲಿಯೂ ಹಬ್ಬದ ಹತ್ತಿರದವಾದ ಶನಿವಾರ ಮತ್ತು ಭಾನುವಾರದ ದಿವಸಗಳಲ್ಲಿ ಜನ ಮತ್ತು ವಾಹನ ದಟ್ಟಣೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸುವುದೇ ಅತ್ಯಂತ ಸವಾಲಿನ ಕೆಲಸವಾಗಿರುತ್ತದೆ. ಇಂದಿನ ಶನಿವಾರ ದ ವಂತು ದಿಢೀರನೆ ನಿರೀಕ್ಷೆಗೂ ಮೀರಿ ಹರಿದು ಬಂದ ಜನ ಸಾಗರ ಮತ್ತು ವಾಹನಗಳ ಸುನಾಮಿ ಪೊಲೀಸರ ನೆಮ್ಮದಿ ಕೆಡೆಸಿದ್ದಂತೂ ನಿಜ.
ಇಂದು ಮುಂಜಾನೆಯಿಂದಲೇ, ಪ್ರಾರಂಭವಾದ ವಾಹನ ಸಂಚಾರದ ದಟ್ಟನೆ ಬಿಸಿಲು ನೆತ್ತಿಗೆ ಏರುತ್ತಿದ್ದಂತೆ ಸಂಚಾರ ಮತ್ತಷ್ಟು ಅಧಿಕಗೊಂಡು ಕರ್ತವ್ಯ ನಿರತ ಪೊಲೀಸರನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದರ ಮೂಲಕ ಅವರು ತಾಳ್ಮೆಗೆಡದೆ ಭಾರಿ ಸಂಯಮದಿಂದ ಕರ್ತವ್ಯ ನಿರ್ವಹಿಸುತ್ತಿದ್ದನ್ನು ಕಂಡ ನಮಗೆ ಕನಿಕರೊಂದಿಗೆ, ದಿಟ್ಟತನದ ಕರ್ತವ್ಯ ಪಾಲನೆಗೆ ಹೃತ್ಪೂರ್ವಕವಾಗಿ ಅಭಿನಂದನೆ ವ್ಯಕ್ತಪಡಿಸಬೇಕಾದದ್ದು ಅನಿವಾರ್ಯವೂ ಹೌದೇನಿಸಿತು. ಯಾಕೋ ಏನೋ ಇಂದು ಎಂದಿಲ್ಲದ ಜನ ಹಾಗೂ ವಾಹನಗಳು ಕಾರ್ಪೊರೇಷನ್ ಕಡೆಯಿಂದ ಮತ್ತು ಕಾಳಿದಾಸ ಮಾರ್ಗವಾಗಿ ಊಹಿಸಲಾಗದ ರೀತಿಯಲ್ಲಿ ಹರಿದು ಬಂದದ್ದು ಆಶ್ಚರ್ಯಕ್ಕೆ ಎಡೆ ಮಾಡಿ ಕೊಡುವಂತಿತ್ತು.
ನಿರೀಕ್ಷೆಗೂ ಮೀರಿ ಜನ ಹಾಗೂ ವಾಹನಗಳು ಇತ್ತ ಸಾಗಿದ್ದರಿಂದ ಪೊಲೀಸರಿಗೆ ಇವುಗಳನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆಯಾಗಿದ್ದರೂ ತಮ್ಮ ಚಾಕಚಕ್ಯತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನು ಮೆಚ್ಚಲೇಬೇಕು.
ಊಟಕ್ಕೂ ಲಾಟರಿ!
ಇಂದು ಮುಂಜಾನೆಯಿಂದಲೇ ಸಂಚರ ನಿಯಂತ್ರಣದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಂಚಾರ ಪೊಲೀಸರು ಕೆಂಪೇಗೌಡ ರಸ್ತೆ ಮತ್ತು ಬಿವಿಕೆ ಅಯ್ಯಂಗಾರ್ ರಸ್ತೆ ಕಡೆ ವಾಹನ ಸಂಚಾರ ಎಳ್ಳಷ್ಟೂ ಕಡಿಮೆಯಾಗದ ಕಾರಣ ಸ್ಥಳವನ್ನು ಬಿಟ್ಟು ಕದಲಾಗಿದೆ ಜವಾಬ್ದಾರಿಯ ಸ್ಥಿತಿಗೆ ಸಿಲುಕಿದ್ದರಿಂದ ಊಟಕ್ಕೂ ಬಿಡುವು ಸಿಗದೆ ಏಕಾದಶಿ ವ್ರತ ಆಚರಿಸಿದಂತೆ ಸಹಜವಾಗಿ ಕಂಡುಬಂದಿತು.
ಉಪ್ಪಾರಪೇಟೆ ಪೊಲೀಸ್ ಠಾಣಾಧಿಕಾರಿ ಕೃಷ್ಣಮೂರ್ತಿ ರವರು ಸಂಚಾರ ನಿಯಂತ್ರಿಸಲು ವಹಿಸುತ್ತಿದ್ದ ಶ್ರಮ ಮತ್ತು ಜಾಳ್ಮೆಯ ನಡೆ ಹಾಗೂ ತಮ್ಮ ಸಹಪಾಠಿಗಳಿಗೆ ಸಲಹೆ ನೀಡುವುದರ ಮೂಲಕ ಅವರು ಪಡುತ್ತಿದ್ದ ಅವಿರತ ಪರಿಶ್ರಮ ಕಂಡು ಪೊಲೀಸರ ಕೆಲಸ ಎಲ್ಲ ಸಮಯದಲ್ಲೂ, ಹೂವಿನ ಹಾದಿಯಲ್ಲ ಕೆಲವು ಸಮಯ ಸಂದರ್ಭಗಳಲ್ಲಿ ಮುಳ್ಳಿನ ಹಾದಿ ಅಲ್ಲ ಎಂಬುದನ್ನು ಕೃಷ್ಣಮೂರ್ತಿ ಅವರು ಕರ್ತವ್ಯ ನಿಭಾಯಿಸುತ್ತಿದ್ದನ್ನು ಕಂಡ ನಮಗೆ ನಿಜಕ್ಕೂ ಕೈಕನ್ನಡಿಯಂತೆ ಕಂಡುಬಂದಿತು.
ಇಂತಹ ಕಠಿಣ ಪರಿಸ್ಥಿತಿಯ ಮಧ್ಯೆಯೂ ತಾಳ್ಮೆಯಿಂದ ಸ್ವಲ್ಪವೂ ನೆಮ್ಮದಿ ಕಳೆದುಕೊಳ್ಳದೆ, ಕರ್ತವ್ಯ ನಿರ್ವಹಿಸುವ ಪೊಲೀಸರ ಕಾರ್ಯ ಶೀಲತೆಗೆ ಮೆಚ್ಚುಗೆ ಸೂಚಿಸಲೇಬೇಕು.
ಈ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದ ಮುಖ್ಯ ಸಂಗತಿ ಏನೆಂದರೆ, ಕಾನೂನು ಮತ್ತು ಸುವ್ಯವಸ್ಥೆಯ ಪೊಲೀಸ್ ಪೇದೆಗಳು ಇವರ ಸಹಕಾರಕ್ಕೆ ಕೈಜೋಡಿಸಿ ಸಹಕರಿಸಿದ್ದೇ ಹಾಗಿದ್ದರೆ ಒಂದಿಷ್ಟು ಸೂಕ್ತವೆನಿಸುತ್ತಿತೆನೋ ಎನಿಸುತ್ತದೆ. ಈ ಕ್ರಮ ಪೊಲೀಸ್ ವ್ಯವಸ್ಥೆಯಲ್ಲಿ ಇದೆಯಾದರೂ ಅದು ವ್ಯವಸ್ಥಿತವಾಗಿ ಕಾರ್ಯರೂಪದಡಿಯಲ್ಲಿ ನಡೆಯದೆ ಇರುವುದು ನಿಜಕ್ಕೂ ವಿಸ್ಮಯಕರ. ಇಷ್ಟೊತ್ತು ಸತ್ಯ, ದೀಪಾವಳಿ ಹಬ್ಬದ ಜಾತ್ರೆ ಮುಗಿಯುವವರೆಗೂ ಮೆಜೆಸ್ಟಿಕ್ ಹಾಗೂ ಸಿಟಿ ಮಾರುಕಟ್ಟೆ ಭಾಗದಲ್ಲಿ ಪೊಲೀಸರ ನೆಮ್ಮದಿಗೆ ನೀರಿಳಿಯದ ಗಂಟಲಲ್ಲಿ, ಕಡಬು ತುರಿಕಿ ದಂತಹ ಪರಿಸ್ಥಿತಿ, ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಈ ಎಲ್ಲಾ ಪರಿಸ್ಥಿತಿಯ ಚಿತ್ರಾವಳಿಯನ್ನು ಕಂಡಾಗ ಇಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಲು ಹಬ್ಬ ಹರಿದಿನಗಳಲ್ಲಿ, ಸಿಆರ್‌ಪಿ ಪೊಲೀಸರನ್ನು ಸ್ಥಳೀಯ ಪೊಲೀಸರೊಂದಿಗೆ ನಿಯೋಜಿಸಬೇಕಾದದ್ದು ಅತ್ಯಂತ ಅನಿವಾರ್ಯವೆನಿಸುತ್ತದೆ.
ಚಿತ್ರ ಹಾಗೂ ವರದಿ: ಶಿವಪ್ರಸಾದ್ ಎಸ್.