ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೆಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಬಗ್ಗೆ ಮಾಹಿತಿ ನೀಡಿದರು. ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಐದು ಪ್ರಕರಣಗಳಿಗೆ ಸೇರಿದ ₹70 ಲಕ್ಷ ಮೌಲ್ಯದ 1 ಕೆ.ಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇತರೆ ಮೂವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬೆಂಗಳೂರು ನಗರ ಪೊಲೀಸರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ವಿವಿ ಪುರ ಪೊಲೀಸ್ ಠಾಣೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ₹1,22,78,000 ಮೌಲ್ಯದ 1 ಕೆ.ಜಿ 570 ಗ್ರಾಮ್ ಚಿನ್ನ ಹಾಗೂ ವಜ್ರಾಭರಣ ವಶಕ್ಕೆ ಪಡೆದಿದ್ದಾರೆ.
ಇದೇ ರೀತಿ ಬೆಳ್ಳಂದೂರು ಪೊಲೀಸ್ ಠಾಣೆ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿ ₹22,50,000 ಮೌಲ್ಯದ 322 ಗ್ರಾಮ್ ಚಿನ್ನಾಭರಣ ಹಾಗೂ 71 ಗ್ರಾಮ್ ಕೃತಕ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂಪಂಗಿರಾಮನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಚಿನ್ನದ ಮಳಿಗೆಯಲ್ಲಿ ಮಾಜಿ ಉದ್ಯೋಗಿ ಹಾಗೂ ಆತನ ಸಹಚರರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ. ಇವರಿಂದ ₹51.8 ಲಕ್ಷ ಮೌಲ್ಯದ 740 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಷೇರು ಮಾರಾಟ ಹಗರಣಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಆಕ್ಸಿಸ್ ಬ್ಯಾಂಕಿನ ಮ್ಯಾನೇಜರ್, ಮೂವರು ಸೇಲ್ಸ್ ಎಕ್ಷಿಕ್ಯೂಟಿವ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಯಿಂದ ದೇಶದ ವಿವಿಧ ಭಾಗಗಳಲ್ಲಿ ಇಂತಹ 254 ಪ್ರಕರಣಗಳು ದಾಖಲಾಗಿವೆ. ಬಂಧಿತರು ತೆರೆದಿದ್ದ 6 ಬ್ಯಾಂಕ್ ಖಾತೆಗಳಲ್ಲಿ ₹97 ಕೋಟಿಯಷ್ಟು ವರ್ಗಾವಣೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ 9 ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ
ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ₹9 ಲಕ್ಷ ಮೌಲ್ಯದ 120 ಗ್ರಾಂ ಚಿನ್ನಾಭರಣ ಹಾಗೂ ಅಪರಾಧಕ್ಕೆ ಬಳಸಿದ್ದ ಒಂದು ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ.