ಕಾರವಾರ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಗೋವಾಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 90 ಲಕ್ಷ ರೂ. ಮೌಲ್ಯದ ಮದ್ಯಸಾರ ಹಾಗೂ ಎರಡು ಟ್ಯಾಂಕರ್ ವಾಹನಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಜೊಯಿಡಾ ತಾಲೂಕಿನ ರಾಮನಗರದಲ್ಲಿರುವ ಧಾರವಾಡ-ಗೋವಾ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಬಳಿ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ.
ದಾವಣಗೆರೆ ಶುಗರ್ ಕಂಪನಿಯಿಂದ ಗೋವಾದ ಗ್ಲೋಬಲ್ ಕಮ್ ಕಾರ್ಪ್‌ಗೆ 30,000 ಲೀಟರ್ ‘ಡಿನೇಚರ್ಡ್ ರೆಕ್ಟಿಫೈಡ್ ಸ್ಪಿರಿಟ್’ (Denatured rectified spirit) ಎಂದು ನಕಲಿ ದಾಖಲೆ ಸೃಷ್ಟಿಸಿ ಒಂದು ಟ್ಯಾಂಕರ್‌ನಲ್ಲಿ ಸಾಗಿಸಲಾಗುತ್ತಿತ್ತು.
ಅದೇ ರೀತಿ, ದಾವಣಗೆರೆಯ ಶ್ರೀ ಸಾಯಿ ಟ್ರೇಡರ್ಸ್‌ನಿಂದ ಗೋವಾದ ವರ್ಧನ್ ಸಪ್ಲಿಮೆಂಟ್ಸ್ ಇಂಡಿಯಾ ಪ್ರೈ.ಲಿ.ಗೆ 20,000 ಲೀಟರ್ ‘ಎಥೆನಾಲ್’ (Ethanol) ಎಂದು ನಕಲಿ ದಾಖಲೆಗಳೊಂದಿಗೆ ಮತ್ತೊಂದು ಟ್ಯಾಂಕರ್‌ನಲ್ಲಿ ಸಾಗಿಸಲಾಗುತ್ತಿದ್ದ ವಾಹನಗಳನ್ನು ಅಧಿಕಾರಿಗಳು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ.
ಅಬಕಾರಿ ಇಲಾಖೆಯ ಮಂಗಳೂರು ವಿಭಾಗದ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಎ. ಎಲ್. ನಾಗೇಶ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಎ. ಅವರ ಮಾರ್ಗದರ್ಶನದಂತೆ ಫೆಬ್ರವರಿ 21 ರಂದು ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು.
ಟ್ಯಾಂಕರ್‌ಗಳಲ್ಲಿದ್ದ ದ್ರವವನ್ನು ಪ್ರೈಮರಿ ಡಿಸ್ಟಿಲರಿಯ ಕೆಮಿಸ್ಟ್ ಮೂಲಕ ಸ್ಥಳದಲ್ಲೇ ಆಲ್ಕೋ ಮೀಟರ್ ಉಪಕರಣ ಬಳಸಿ ಪರೀಕ್ಷಿಸಲಾಯಿತು. ಈ ವೇಳೆ ಅದು ‘ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೋಹಾಲ್’ (Extra Neutral Alcohol) ಎಂಬುದು ದೃಢಪಟ್ಟಿದ್ದರಿಂದ, ತಕ್ಷಣವೇ 50,000 ಲೀಟರ್ ಮದ್ಯಸಾರ ಹಾಗೂ ಎರಡು ಟ್ಯಾಂಕರ್‌ಗಳನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ.
ಟ್ಯಾಂಕರ್ ಚಾಲಕರುಗಳಾದ ಮಧ್ಯಪ್ರದೇಶದ ಇಂದೋರ್ ಮೂಲದ ಮಗ್ನರ್ ಸಿಂಗ್ ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಧರ್ಮಪ್ಪ ಕಳಕಪ್ಪ ಕಟ್ಟಿಮನಿ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯಲ್ಲಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ಹಾಗೂ ದಾಂಡೇಲಿ ವಲಯದ ಅಬಕಾರಿ ನಿರೀಕ್ಷಕರು ಪ್ರತ್ಯೇಕ ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ತಟಸ್ಥ ಮದ್ಯಸಾರದ ಅಂದಾಜು ಮೌಲ್ಯ 40,00,000 ರೂ. ಹಾಗೂ ಟ್ಯಾಂಕರ್‌ಗಳ ಅಂದಾಜು ಮೌಲ್ಯ 50,00,000 ರೂ. ಸೇರಿ ಒಟ್ಟು 90 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತು ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







