ಕಾರ್ಕಳ, ಆ. 12 : ಕೌಡೂರು ರಂಗನಪಳ್ಳಿಯ ಶ್ಯೈನಿ ಅಸ್ಮಾ ಸಲ್ಡಾನ ಅವರು ವಾಣಿಜ್ಯ ಪೈಲಟ್ ಪರವಾನಗಿ ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶೋಕ್ ಜಾಕೋಬ್ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿಯ ಪುತ್ರಿಯಾದ ಶ್ಯೈನಿ ಅವರು ಪ್ರಾಥಮಿಕದಿಂದ ಪಿಯುಸಿವರೆಗಿನ ಶಿಕ್ಷಣವನ್ನು ಕಾರ್ಕಳದ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪೂರ್ಣಗೊಳಿಸಿದರು.
ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಯ ಪ್ರವೇಶ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ ಶ್ಯೈನಿ, 2023ರ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿಗೆ ಆಯ್ಕೆಯಾದರು. ಅಲ್ಲಿ ಕಠಿಣ ವಿಮಾನ ತರಬೇತಿಯನ್ನು ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.
ಕಡಿಮೆ ಅವಧಿಯಲ್ಲಿ ತರಬೇತಿ ಪೂರ್ಣಗೊಳಿಸಿ ಸಾಧನೆ ಮಾಡಿರುವ ಶ್ಯೈನಿ ಅವರ ಈ ಸಾಧನೆಗೆ ಕುಟುಂಬ, ಶಿಕ್ಷಕರು ಮತ್ತು ಸ್ನೇಹಿತರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದು ಆಕಾಶವನ್ನು ತಲುಪಿದ ಅವರ ಸಾಧನೆ ಸ್ಥಳೀಯ ಯುವತಿಯರಿಗೆ ಸ್ಫೂರ್ತಿಯಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







