ಉಡುಪಿ ಜಿಲ್ಲೆಯಲ್ಲಿ ಸರಕಾರದ ಉದ್ದೇಶಿತ ಅಕ್ಕ ಪಡೆಯನ್ನು ಈ ದಿನ ದಿನಾಂಕ: 03/01/2026 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀಮತಿ ಸ್ವರೂಪ ಟಿ.ಕೆ, ಐ.ಎ.ಎಸ್ ಇವರು ಉದ್ಗಾಟಿಸಿದರು. ಈ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್, ಐಪಿಎಸ್, ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯಾ ನಿರ್ವಹಣಾ ಅಧಿಕಾರಿಯವರಾದ ಶ್ರೀ ಪ್ರತೀಕ್ ಬಾಯಲ್, ಐ.ಎ.ಎಸ್ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್, ಶ್ರೀಮತಿ ಅನುರಾಧ ಹಾಗೂ ಅಧಿಕಾರಿಗಳು ಭಾಗಿಯಾಗಿರುತ್ತಾರೆ.
ಅಕ್ಕ ಪಡೆಯ ಬಗ್ಗೆ:
ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕ ಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ಉದ್ದೇಶ:
• ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು.
• ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದು.
• ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಯೆಗಳ ಬಗ್ಗೆ, ಜಾಗೃತಿ ಮೂಡಿಸುವುದು.
• ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆದು ಕಾನೂನಿನ ರಕ್ಷಣೆಯೊಂದಿಗೆ ಭಯಮುಕ್ತ ವಾತಾವರಣ ಸೃಷ್ಟಿಸುವುದು.
ಪ್ರಮುಖ ಚಟುವಟಿಕೆಗಳು:
• ತ್ವರಿತ ಪ್ರತಿಕ್ರಿಯೆ: ತರಬೇತಿ ಪಡೆದ ಅಕ್ಕ ಪಡೆ ತಂಡಗಳು ಸೂಕ್ಷ್ಮ ಪ್ರದೇಶಗಳಲ್ಲಿ patrolling ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತವೆ.
• ಸಮುದಾಯದ ತೊಡಗಿಸಿಕೊಳ್ಳುವಿಕೆ: ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು, ಸಹಾಯವಾಣಿಗಳು ಮತ್ತು ವರದಿ ಮಾಡುವ ಕಾರ್ಯವಿಧಾನಗಳಂತಹ ವಿಷಯಗಳ ಕುರಿತು ಶಾಲೆ, ಕಾಲೇಜು, ಮಾರುಕಟ್ಟೆ ಮತ್ತು ನೆರೆಹೊರೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುವುದು.
• ಸಮಾಲೋಚನೆ: ಮಕ್ಕಳ ಕಲ್ಯಾಣ ಸಮಿತಿಗಳು(CWCs), ಮಹಿಳಾ ಸಹಾಯವಾಣಿಗಳು ಸರ್ಕಾರೇತರ ಸಂಸ್ಥೆಗಳು(NGOS), ಕಾನೂನು ನೆರವು ಮತ್ತು ಆಶ್ರಯ ತಾಣ Shelter homes) ಗಳೊಂದಿಗೆ ಸುಗಮ ಸಂಪರ್ಕ ಕಲ್ಪಿಸಿ ಸಮಾಲೋಚನೆ ಬೆಂಬಲವನ್ನು ನೀಡುವುದು.
• ವಿಶ್ವಾಸ ವರ್ಧನೆ: ಸಮುದಾಯದಲ್ಲಿ ಸ್ನೇಹಪರ ಮತ್ತು ವಿಶ್ವಾಸಾರ್ಹ ಸ್ಥಿತಿಯನ್ನು ಸ್ಥಾಪಿಸುವುದು, ಸಂತ್ರಸ್ತೆಯರು ಮತ್ತು ಕುಟುಂಬಗಳು ಭಯವಿಲ್ಲದ ಸಹಾಯ ಪಡೆಯಲು ಪ್ರೋತ್ಸಾಹಿಸುವುದು.

ಉದ್ದೇಶಿತ ಫಲಾನುಭವಿಗಳು:
• ಕಿರುಕುಳ, ಕೌಟುಂಬಿಕ ಹಿಂಸೆ, ಈವ್ ಟಿಸಿಂಗ್ ಅಥವಾ ಯಾವುದೇ ರೀತಿಯ ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳು.
• ನಿರ್ಲಕ್ಷ್ಯ ಕಳ್ಳಸಾಗಣೆ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಬಾಲಭಿಕ್ಷಾಟನೆ ಮಾದಕ ದ್ರವ್ಯ ಅಥವಾ ನಿಂದನೆಗೆ ಒಳಗಾದ ಮಕ್ಕಳು.
• ಜಾಗೃತಿ ಮತ್ತು ಶಿಕ್ಷಣದ ಮೂಲಕ ಇಡೀ ಸಮಾಜವು ಈ ಯೋಜನೆಯ ಫಲಾನುಭವಿಯಾಗಿದೆ.
ಅಕ್ಕ ಪಡೆ ವ್ಯಾಪ್ತಿ:
• ಜಿಲ್ಲಾ ಮಟ್ಟದಲ್ಲಿ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ‘ಅಕ್ಕ ಪಡೆ’ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ.
• ತಂಡದ ಸದಸ್ಯರನ್ನು ಶಾಲೆ, ಕಾಲೇಜು, ಬಾಲಕಿಯರ/ಮಹಿಳಾ ಹಾಸ್ಟೆಲ್, ಬಸ್/ರೈಲ್ವೆ ನಿಲ್ದಾಣಗಳು, ಸ್ಥಳೀಯ ಮಾರುಕಟ್ಟೆ ಪ್ರೇಕ್ಷಣಿಯ ಸ್ಥಳಗಳು, ಪವಿತ್ರ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗುವುದು.
ಅಕ್ಕ ಪಡೆಯ ಪಾತ್ರ ಮತ್ತು ಜವಾಬ್ದಾರಿಗಳು:
• ಮಹಿಳಾ ಕಿರುಕುಳ ಪ್ರಕರಣಗಳ ಬಗ್ಗೆ, ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ವರದಿ ಮಾಡುವುದು.
• ಮಹಿಳೆ ಮತ್ತು ಮಕ್ಕಳಿಗೆ ಸಂರಕ್ಷಣೆ ಕಾರ್ಯ ವಿಧಾನದ ತರಬೇತಿ ನೀಡುವುದು.
• ಮಹಿಳೆಯರ ಕಿರುಕುಳ ಮತ್ತು ಈವ್ ಟೀಸಿಂಗ್ ತಡೆಗಟ್ಟಲು ಶಾಲೆ, ಕಾಲೇಜು, ಉದ್ಯಾನವನ, ಸಿನಿಮಾ ಮಂದಿರ, ಸ್ಥಳೀಯ ಮಾರುಕಟ್ಟೆಗಳಿಗೆ ನಿಯಮಿತವಾಗಿ ಭೇಟಿ ನೀಡುವುದು.
• ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಹಾಗೂ ಅಪರಿಚಿತರ ಬಗ್ಗೆ ಎಚ್ಚರದಿಂದಿರುವುದರ ಬಗ್ಗೆ ಜಾಗೃತಿ ಮೂಡಿಸುವುದು.
• POCSO, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಮ, ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ, ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು.
• ಮಾದಕ ದ್ರವ್ಯಗಳು ಮತ್ತು ಮಾದಕ ದ್ರವ್ಯಗಳ ದುರುಪಯೋಗ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ, ಜಾಗೃತಿ ಮೂಡಿಸುವುದು.
• ಸಂಚಾರ ನಿಯಮಗಳು ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು.
• ಸಹಾಯವಾಣಿಗಳು 1098, 181, 112 ಇತ್ಯಾದಿ ಬಗ್ಗೆ ಜಾಗೃತಿ ಮೂಡಿಸುವುದು.
• ಸೈಬರ್ ಅಪರಾಧಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು.
• ಶಾಲೆ, ಕಾಲೇಜು, ಹುಡುಗಿಯರು ಮತ್ತು ಉದ್ಯೋಗಸ್ತ ಮಹಿಳೆಯರ ವಸತಿ ನಿಲಯಗಳ ಅವರಣದಲ್ಲಿ ದುಷ್ಕರ್ಮಿಗಳ ಮೇಲೆ ನಿಗಾ ಇರಿಸುವುದು.
• ಸಿಗ್ನಲ್‌ನ ಬಳಿ ಮಕ್ಕಳ ಭಿಕ್ಷಾಟನೆಯನ್ನು ತಡೆಗಟ್ಟುವುದು.
• ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು.
• ಸಹಾಯವಾಣಿಗಳಿಂದ ಬರುವ ಎಲ್ಲಾ ತುರ್ತು ಕರೆಗಳಿಗೆ ಸ್ಪಂದಿಸುವುದು ಮತ್ತು ಸೂಕ್ತ ಶಿಷ್ಟಾಚಾರದೊಂದಿಗೆ ಸಂತ್ರಸ್ತೆಯರನ್ನು ರಕ್ಷಿಸುವುದು.
ನಿರೀಕ್ಷಿತ ಫಲಿತಾಂಶಗಳು:
• ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಸುಧಾರಣೆ.
• ಕಾನೂನು ಹಕ್ಕುಗಳು ಮತ್ತು ಬೆಂಬಲ ಸೇವೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತ ಸಮಾಜ ನಿರ್ಮಾಣ.
• ಕಾನೂನು ಜಾರಿ ಸಂಸ್ಥೆಗಳಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಸಮುದಾಯದಲ್ಲಿ ನಂಬಿಕೆ ಉಳ್ಳ ಸಮಾಜ ರೂಪಣೆ.
• ಪೂರ್ವಭಾವಿ ತಡೆಗಟ್ಟುವಿಕೆ ಮತ್ತು ಮಧ್ಯಸ್ತಿಕೆಯ ಮೂಲಕ ಲಿಂಗ ಆಧಾರಿತ ಹಿಂಸಾಚಾರದಲ್ಲಿ ಕಡಿತ.
ಸಮಾರೋಪ:
ಅಕ್ಕ ಪಡೆಯು ಸಹೋದರತೆ ಮತ್ತು ರಕ್ಷಣೆಯ ಮನೋಭಾವವನ್ನು ಸಾಕಾರಗೊಳಿಸುತ್ತದೆ, ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವವರಿಗೆ ಮೊದಲ ಪ್ರತಿಕ್ರಿಯೆ ನೀಡುವವರು, ಶಿಕ್ಷಕರು ಮತ್ತು ರಕ್ಷಕರಾಗಿ ಕಾರ್ಯನಿರ್ವಹಿಸಲು ಮಹಿಳಾ ಕೆಡೆಟ್‌ಗಳಿಗೆ ಅಧಿಕಾರ ನೀಡುತ್ತದೆ. ಪೊಲೀಸರು ಮತ್ತು ಸಾರ್ವಜನಿಕರ ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಅಕ್ಕ ಪಡೆ ಸುರಕ್ಷಿತ ಸಮುದಾಯಗಳನ್ನು ಸೃಷ್ಟಿಸುತ್ತದೆ ಮತ್ತು ಗೌರವ, ಬೆಂಬಲ ಮತ್ತು ಜಾಗೃತಿಯ ಸಂಸ್ಕೃತಿಯನ್ನು ಪೋಷಿಸುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






