ದಿನಾಂಕ:09/09/2024 ರಂದು ಜಿ.ಎಸ್.ಟಿ. ಅಧಿಕಾರಿಗಳು, ಉದ್ಯಮಿಯೊಬ್ಬರಿಂದ 1 ಕೋಟಿ 50 ಲಕ್ಷ ಹಣವನ್ನು ಸುಲಿಗೆ ಮಾಡಿದ್ದ ಬಗ್ಗೆ ಬೈಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಾಲ್ಕು ಜಿ.ಎಸ್.ಟಿ. ಅಧಿಕಾರಿಗಳನ್ನು ಈ ಹಿಂದೆ ಬಂದಿಸಲಾಗಿತ್ತು, ಈ ಪ್ರಕರಣವನ್ನು ಕೂಲಂಕುಶ ತನಿಖೆಯ ಸಲುವಾಗಿ ಸಿ.ಸಿ.ಬಿ. ಸಂಘಟಿತ ಅಪರಾಧ ದಳ ಕ್ಕೆ ವಹಿಸಿಕೊಡಲಾಗಿತ್ತು.
ಈ ಕೇಸಿನ ತನಿಖೆ ಕೈಗೊಂಡ ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಕಮೀಷನರ್ ಮತ್ತು ತಂಡದವರು ಈಗಾಗಲೇ ದಸ್ತಗಿರಿ ಮಾಡಿದ್ದ ನಾಲ್ಕು ಜಿ.ಎಸ್.ಟಿ ಆರೋಪಿತ ಅಧಿಕಾರಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ, ಜಿ.ಎಸ್.ಟಿ. ಅಧಿಕಾರಿಗಳಿಗೆ ಹಣ ಸುಲಿಗೆ ಮಾಡಲು, ಇಬ್ಬರು ಖಾಸಗಿ ವ್ಯಕ್ತಿಗಳು ಸಹಕರಿಸಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಈ ಇಬ್ಬರು ಖಾಸಗಿ ವ್ಯಕ್ತಿಗಳೇ ಉದ್ಯಮಿಯಾದ ಫಿರಾದಿಯವರ ಕಡೆಯವರಿಂದ ಹವಾಲ ಮೂಲಕ ಪಡೆದುಕೊಂಡಿರುವ ಅಂಶ ತನಿಖೆಯಿಂದ ತಿಳಿದು ಬಂದಿದ್ದು, ಅದರಂತೆ ಆರೋಪಿತ ಅಧಿಕಾರಿಗಳ ಮಾಹಿತಿಯಂತೆ ಈ ಕೇಸಿನಲ್ಲಿ ಭಾಗಿಯಾಗಿದ್ದ. ಇಬ್ಬರು ಖಾಸಗಿ ವ್ಯಕ್ತಿಗಳ ಪೈಕಿ, ಓರ್ವನನ್ನು ದಿ:18/09/2024 ರಂದು ಶಾಂತಿನಗರದಲ್ಲಿ ವಶಕ್ಕೆ ಪಡೆಯಲಾಯಿತು. ಆರೋಪಿತನನ್ನು ವಿಚಾರಣೆಗೊಳಪಡಿಸಲಾಗಿ ಈತನ ಸಹಚರನಾದ ಮತ್ತೋರ್ವ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ.
ದಿನಾಂಕ:19/09/2024 ರಂದು ವಶಕ್ಕೆ ಪಡೆದಿದ್ದ ಖಾಸಗಿ ವ್ಯಕ್ತಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 5 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು. ದಿನಾಂಕ:19/09/2024 ರಂದು ಆರೋಪಿತ ನಾಲ್ಕು ಜಿ.ಎಸ್.ಟಿ. ಅಧಿಕಾರಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನಾಲ್ಕು ಆರೋಪಿತ ಅಧಿಕಾರಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ತನಿಖೆಯನ್ನು ಮುಂದುವರೆಸಿ, ಆರೋಪಿತ ಖಾಸಗಿ ವ್ಯಕ್ತಿಯ ಮಾಹಿತಿಯ ಮೇರೆಗೆ ಮತ್ತೊರ್ವ ಖಾಸಗಿ ಆರೋಪಿತನನ್ನು ದಿನಾಂಕ:20/09/2024 ರಂದು ಶಾಂತಿನಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು. ವಿಚಾರಣೆಯ ವೇಳೆಯಲ್ಲಿ ಸುಲಿಗೆ ಮಾಡಿದ್ದ ಹಣದಿಂದ 306 ಗ್ರಾಂ ಚಿನ್ನದ ಗಟ್ಟಿ ಖರೀದಿಸಿರುವುದಾಗಿ ತಿಳಿಸಿರುತ್ತಾನೆ. ಆರೋಪಿತನು ಹೊಂದಿರುವ ಸುಂಕದಕಟ್ಟೆಯ ಅಂಗಡಿಯಿಂದ 306 ಗ್ರಾಂ ಚಿನ್ನದ ಗಟ್ಟಿ ವಶಪಡಿಸಿಕೊಂಡಿರುತ್ತದೆ.
ದಿನಾಂಕ:21/09/2024 ರಂದು ಮತ್ತೊರ್ವ ಖಾಸಗಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ 3 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆಯಲಾಯಿತು. ಅದೇ ದಿನ ಖಾಸಗಿ ಆರೋಪಿತ ಮಾಹಿತಿಯ ಮೇರೆಗೆ 4 ಆರೋಪಿತ ಜಿ.ಎಸ್.ಟಿ. ಅಧೀಕಾರಿಗಳ ಪೈಕಿ ಓರ್ವ ಆರೋಪಿತ ಜಿ.ಎಸ್.ಟಿ. ಅಧಿಕಾರಿಯನ್ನು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು, ನ್ಯಾಯಾಂಗ ಬಂಧನದಿಂದ 3 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆಯಲಾಯಿತು.
ತನಿಖೆಯನ್ನು ಮುಂದುವರೆಸಿ, ಆರೋಪಿತ ಜಿ.ಎಸ್.ಟಿ. ಅಧಿಕಾರಿಯ ಮಾಹಿತಿಯ ಮೇರೆಗೆ – 57 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿರುತ್ತದೆ.
ಆರೋಪಿತ ಖಾಸಗಿ ವ್ಯಕ್ತಿಗಳಿಂದ ಒಟ್ಟು 12,30,000/- ಹಣವನ್ನು ಅವರ ಬ್ಯಾಂಕ್‌ನಲ್ಲಿ ಜಮಾ ಮಾಡಿದ್ದು, ಈ ಹಣವನ್ನು ಪ್ರೀಜ್ ಮಾಡಲಾಗಿದೆ.
ದಿನಾಂಕ:23/09/2024 ರಂದು ಆರೋಪಿತ ಓರ್ವ ಜಿ.ಎಸ್.ಟಿ. ಅಧಿಕಾರಿ, ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕೇಸಿನ ತನಿಖೆಯನ್ನು ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತರು, ಅಪರಾಧಗಳು, ರವರ ಮಾರ್ಗದರ್ಶನದಂತೆ, ಉಪ ಪೊಲೀಸ್ ಆಯುಕ್ತರು, ಅಪರಾಧ-2 ರವರ ನೇತೃತ್ವದಲ್ಲಿ, ಸಿಸಿಬಿ ಘಟಕದ ಸಂಘಟಿತ ಅಪರಾಧ ದಳ (ಪೂರ್ವ) ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ತನಿಖೆಯನ್ನು ಕೈಗೊಂಡಿರುತ್ತಾರೆ.