ಮಂಗಳೂರು: ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಮಂಗಳೂರಿನ ‘ಮಾಂಡ್ ಸೊಭಾಣ್’ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಲಾದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಮೇಳವು ನಿರಂತರ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ಕಾಲ ನಡೆದಿದ್ದು, ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದೆ.

ನವೆಂಬರ್ 3ರಂದು ಮಂಗಳೂರಿನ ಪುರಭವನದಲ್ಲಿ ಆರಂಭಗೊಂಡ ‘ಕೊಂಕಣಿ ನಿರಂತರಿ – ಸಂಸಾರ್ ಸೊರಾಸೊರಿ’ ಎಂಬ ನಿರಂತರ ಸಮೂಹ ಗಾಯನ ಕಾರ್ಯಕ್ರಮವು ನವೆಂಬರ್ 15ರಂದು ಸಂಜೆ 6.15ಕ್ಕೆ ಯಶಸ್ವಿಯಾಗಿ ಸಮಾಪನಗೊಂಡಿತು.

ಈ ಐತಿಹಾಸಿಕ ಸಂಗೀತ ಮಹಾಮೇಳದಲ್ಲಿ ದೇಶ-ವಿದೇಶಗಳ ಒಟ್ಟು 7,235 ಗಾಯಕರು ಭಾಗವಹಿಸಿ, 4,596 ವಿಭಿನ್ನ ಕೊಂಕಣಿ ಹಾಡುಗಳನ್ನು ಹಾಡುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ, ಕಾರ್ಯಕ್ರಮದ ಅವಧಿಯಲ್ಲಿ ಯಾವುದೇ ಹಾಡು ಅಥವಾ ಗಾಯಕರ ಪುನರಾವರ್ತನೆಯಾಗದಂತೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನಿರಂತರ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ಕಾಲ ನಡೆದ ಈ ಸಂಗೀತ ಮ್ಯಾರಥಾನ್ ಕೊಂಕಣಿ ಸಂಗೀತ ಲೋಕದ ಅಭೂತಪೂರ್ವ ಸಾಧನೆಯಾಗಿ ಗುರುತಿಸಿಕೊಂಡಿದೆ. ಸಂಗೀತ ಮ್ಯಾರಥಾನ್ ನಲ್ಲಿ ದಕ್ಷಿಣ ಕನ್ನಡ 155, ಉಡುಪಿ 29, ಉತ್ತರ ಕನ್ನಡ 20, ಬೆಂಗಳೂರು 9, ಮಲೆನಾಡು ಪ್ರದೇಶ 13, ಮಹಾರಾಷ್ಟ್ರ 13, ಗೋವಾ 53, ಕೇರಳ 3, ಅಂತರಾಷ್ಟ್ರೀಯ ಪಂಗಡಗಳು 5, ಹೀಗೆ 300 ತಂಡಗಳು ಭಾಗವಹಿಸಿದ್ದರು. ನವೆಂಬರ್ 15ರಂದು ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಅಧಿಕೃತ ಪ್ರತಿನಿಧಿ ಸ್ವಪ್ನಿಲ್ ದಂಗಾರ್ಕರ್ ದಾಖಲೆಯನ್ನು ಘೋಷಿಸಿ ಪ್ರಮಾಣಪತ್ರ ಹಸ್ತಾಂತರಿಸಿದರು. ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಮಾತನಾಡಿ ಇಂಥ ದಾಖಲೆಗಳನ್ನು ದಕ್ಷಿಣ ಕನ್ನಡ ಮಂಗಳೂರು ಜಿಲ್ಲೆಯವರು ಮಾತ್ರ ಮಾಡ್ಲಿಕ್ಕೆ ಸಾಧ್ಯ ಎಂದು ಮಾಂಡ್ ಸೊಭಾಣ್ ತಂಡವನ್ನು ಅಭಿನಂದಿಸಿದರು. ಆರತಿ ಕೃಷ್ಣ ಕಾರ್ಯದರ್ಶಿ, ಎಐಸಿಸಿ, ರವರು ಸನ್ಮಾನ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಅಭಿನಂದನೆಯನ್ನು ಸಂದೇಶವನ್ನು ವಾಚಿಸಿ ಕರ್ನಾಟಕ ಸರಕಾರದ ವತಿಯಿಂದ ಗಿನ್ನಿಸ್ ದಾಖಲೆಯ ಕಾರ್ಯಕ್ರಮಕ್ಕೆ 1 ಕೋಟಿ ನೀಡುವ ಭರವಸೆಯನ್ನು ನೀಡಿದರು.

‘ಮಾಂಡ್ ಸೊಭಾಣ್’ ಸಂಸ್ಥೆಯ 40ನೇ ವರ್ಷದ ರೂಬಿ ಜುಬಿಲಿ ಸಂಭ್ರಮದ ಅಂಗವಾಗಿ ಹಾಗೂ ಹೇರಿಕ್ ಒಜಾರಿಯೊ ಇವರ ಸ್ಮರಣಾರ್ಥವಾಗಿ ಈ ಬೃಹತ್ ಸಂಗೀತ ಮಹಾಮೇಳವನ್ನು ಆಯೋಜಿಸಲಾಗಿತ್ತು. ಕೊಂಕಣಿ ಭಾಷೆ ಮತ್ತು ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದರ ಜೊತೆಗೆ, ವಿವಿಧ ಧರ್ಮ, ಜಾತಿ ಹಾಗೂ ದೇಶಗಳ ಜನರನ್ನು ಸಂಗೀತದ ಮೂಲಕ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಮುಖ್ಯ ಅತಿಥಿಯಾಗಿ ಯು.ಟಿ. ಖಾದರ್ ( ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.)
ರೊನಾಲ್ಡ್ ಕುಲಸೋ(ಸ್ವಾಗತ ಸಮಿತಿಯ ಅಧ್ಯಕ್ಷರು).
ಗೌರವಾನ್ವಿತ ಅತಿಥಿಗಳಾದ ಐವನ್ ಡಿಸೋಜಾ( ವಿಧಾನ ಪರಿಷತ್ ಸದಸ್ಯರು) (MLC).
ಮೈಕೆಲ್ ಡಿಸೋಜಾ( ವಿಷನ್ ಕೊಂಕಣಿ)
ಆರತಿ ಕೃಷ್ಣ (ಕಾರ್ಯದರ್ಶಿ, ಎಐಸಿಸಿ ಹಾಗೂ ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಉಸ್ತುವಾರಿ)
ಜಾಯ್ಸ್ ಒಜಾರಿಯೊ ( ಕೊಂಕಣಿ ಆಬೊಲೆಂ)
ಸ್ವಪ್ನಿಲ್ ದಂಗಾರ್ಕರ್ ( ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, ಲಂಡನ್ನ ತೀರ್ಪುಗಾರರು) (Adjudicator).
ಲೂಯಿಸ್ ಜೆ. ಪಿಂಟೊ (ಅಧ್ಯಕ್ಷರು, ಮಾ೦ಡ್ ಸೊಭಾಣ್)
ರಾಯ್ ಕ್ಯಾಸ್ಟೆಲಿನೊ (ಹಣಕಾಸು ಸಮಿತಿಯ ಅಧ್ಯಕ್ಷರು)
ರೊನಾಲ್ಡ್ ಮೆಂಡೋನ್ಸಾ (ಮುಂಬೈ, ಕಲಾಂಗಣ ಸಮಿತಿಯ ಅಧ್ಯಕ್ಷರು)
ಜೋಯಲ್ ಪೆರೇರಾ ( ಮುಖ್ಯ ಸಂಗೀತ ನಿರ್ದೇಶಕರು)
ಸ್ಟ್ಯಾನಿ ಅಲ್ವಾರಿಸ್( ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಕರ್ನಾಟಕ ಮತ್ತು ಸಂಯೋಜಕರು)
ನವೀನ್ ಲೋಬೊ ( ಉಪಾಧ್ಯಕ್ಷರು)
ರೊನಾಲ್ಡ್ ಕ್ರಾಸ್ತಾ (ಕಾರ್ಯದರ್ಶಿಗಳು)
ಅಲ್ರಾನ್ ರೊಡ್ರಿಗಸ್ (ಖಜಾಂಚಿಗಳು)
ಮೈಕೆಲ್ ಗ್ರೇಶಿಯಸ್ ( ಗೋವಾ.) ಪ್ರಮುಖರಾದ ವಿತರಿ ಕಾರ್ಕೋಳ್, ಸಂಗೀತ ನಿರ್ದೇಶಕರು ಗಾಯಕರು ರಾಜಕೀಯ ಪ್ರಮುಖರು ಹಾಗೂ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರುಣ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

ಸಾವಿರಾರು ಗಾಯಕರ ಸಾಮೂಹಿಕ ಭಾಗವಹಿಸುವಿಕೆ, ಸಾವಿರಾರು ವಿಭಿನ್ನ ಹಾಡುಗಳ ಪ್ರಸ್ತುತಿ ಹಾಗೂ ಸುದೀರ್ಘ ನಿರಂತರ ಗಾಯನದ ಮೂಲಕ ಮಂಗಳೂರು ಮತ್ತೊಮ್ಮೆ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ಸಾಧನೆಯು ಕರಾವಳಿಯ ಜನತೆಗೆ ಹೆಮ್ಮೆಯ ಕ್ಷಣವಾಗಿದ್ದು, ಕೊಂಕಣಿ ಸಂಗೀತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತಹ ಐತಿಹಾಸಿಕ ಘಟನೆಯಾಗಿದೆ.





ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ
