ಉಡುಪಿ, 31 ಜನವರಿ 2026: ಪೋಪ್ ಲಿಯೋ XIV ಅವರು ರೆ|ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಪ್ರಸ್ತುತ ಅವರು ಶಿರ್ವಾದ ಅವರ್ ಲೇಡಿ ಆಫ್ ಹೆಲ್ತ್ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನೇಮಕಾತಿಯನ್ನು ಶನಿವಾರ, 31 ಜನವರಿ 2026 ರಂದು ಮಧ್ಯಾಹ್ನ 12.00 ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30ಕ್ಕೆ) ರೋಮ್‌ನಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗಿದ್ದು, ಅದೇ ಸಮಯದಲ್ಲಿ ಉಡುಪಿ ಜಿಲ್ಲೆಯ ಕಲ್ಯಾಣಪುರದಲ್ಲಿರುವ ಅವರ್ ಲೇಡಿ ಆಫ್ ಮಿಲಾಗ್ರೆಸ್ ಮಹಾಗಿರಿಜಾಗೃಹದಲ್ಲಿಯೂ ಘೋಷಿಸಲಾಯಿತು.

ವೇರಿ ರೆವ್. ಫಾ. (ಡಾ.) ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು 19 ಆಗಸ್ಟ್ 1962 ರಂದು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಉಚ್ಚಿಲ (ಯರ್ಮಾಳ)ದಲ್ಲಿ ಶ್ರೀ ಲಾರೆನ್ಸ್ ಡಿಸೋಜಾ ಹಾಗೂ ಶ್ರೀಮತಿ ಸಿಸಿಲಿಯಾ ಡಿಸೋಜಾ ದಂಪತಿಗಳಿಗೆ ಜನಿಸಿದರು. ಆಳವಾದ ಕ್ರೈಸ್ತ ಮೌಲ್ಯಗಳನ್ನು ಹೊಂದಿರುವ ಕುಟುಂಬದಿಂದ ಬಂದಿರುವ ಅವರು, ಎಂಟು ಮಂದಿ ಸಹೋದರ–ಸಹೋದರಿಯರ ದೊಡ್ಡ ಕುಟುಂಬದಲ್ಲಿ ಬೆಳೆದಿದ್ದಾರೆ. ಅವರ ವಿಶ್ವಾಸ ಮತ್ತು ಮೌಲ್ಯಗಳು ಅವರ ಧಾರ್ಮಿಕ ಕರೆಯ ಮೇಲೆ ಮಹತ್ವದ ಪ್ರಭಾವ ಬೀರಿವೆ. ಅವರ ಹಿರಿಯ ಸಹೋದರಿಯರಾದ ದಿವಂಗತ ವೆರೋನಿಕಾ ಡಿಸೋಜಾ ಮತ್ತು ದಿವಂಗತ ಕ್ರಿಸ್ಟಿನ್ ಡಿಸೋಜಾ ಅವರು ಶಾಶ್ವತ ವಿಶ್ರಾಂತಿಗೆ ಸೇರ್ಪಡೆಯಾಗಿದ್ದು, ಉಳಿದ ಸಹೋದರ–ಸಹೋದರಿಯರು ಪ್ರಾರ್ಥನೆಯ ಮೂಲಕ ಸದಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ.

ಅವರ ಪ್ರಾಥಮಿಕ ಶಿಕ್ಷಣವು ಉಚ್ಚಿಲಾದ ಸರಸ್ವತಿ ಮಂದಿರ ಹೈಯರ್ ಪ್ರೈಮರಿ ಶಾಲೆಯಲ್ಲಿ (1969–1976) ಆರಂಭವಾಗಿ, ಯರ್ಮಾಳದ ಸರ್ಕಾರಿ ಮೀನುಗಾರಿಕಾ ಪ್ರೌಢಶಾಲೆಯಲ್ಲಿ (1976–1979) ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ಯಡ್ಮರಿನ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ (1979–1981) ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಮುಗಿಸಿದರು.

ದೇವರ ಕರೆಯನ್ನು ಸ್ವೀಕರಿಸಿ, ಫಾ. ಲೆಸ್ಲಿ ಅವರು ಧಾರ್ಮಿಕ ತರಬೇತಿಯ ಜೊತೆಗೆ ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಮಂಗಳೂರಿನ ಸೇಂಟ್ ಜೋಸೆಫ್ ಅಂತರ್-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ತತ್ತ್ವಶಾಸ್ತ್ರ ಅಧ್ಯಯನವನ್ನು (1982–1985) ಪೂರ್ಣಗೊಳಿಸುವ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಕಲಾ ಪದವಿಯನ್ನು ಪಡೆದರು. ಬಳಿಕ ರೋಮ್‌ನ ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಬ್ಯಾಚುಲರ್ ಪದವಿಯನ್ನು (1986–1990) ಸಂಪಾದಿಸಿದರು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು (1991–1993) ಹಾಗೂ ಬೆಂಗಳೂರಿನ ಮನಶ್ಶಾಸ್ತ್ರ ಮತ್ತು ರೂಪಣಾ ಸಂಸ್ಥೆಯಿಂದ ಡೆಪ್ತ್ ಸೈಕಾಲಜಿ ಮತ್ತು ಫಾರ್ಮೇಶನ್‌ನಲ್ಲಿ ಡಿಪ್ಲೊಮಾವನ್ನು (1993–1995) ಪಡೆದರು. ಅವರು ಮುಂದುವರೆದು ಧರ್ಮಶಾಸ್ತ್ರದಲ್ಲಿ ಲಿಸೆನ್ಷಿಯೇಟ್ ಪದವಿಯನ್ನು (1997–1999) ಮತ್ತು ಬೆಲ್ಜಿಯಂನ ಲುವೇನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದಿಂದ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು (1999–2003) ಗಳಿಸಿದರು.

ಫಾ. ಲೆಸ್ಲಿ ಅವರು 10 ಮೇ 1990 ರಂದು ಮಂಗಳೂರು ಧರ್ಮಪ್ರಾಂತ್ಯಕ್ಕಾಗಿ ಯಾಜಕರಾಗಿ ಅಭಿಷೇಕಿತರಾದರು. ಅವರ ಯಾಜಕೀಯ ಸೇವೆ ಕುಂದಾಪುರದ ಹೋಲಿ ರೋಸರಿ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ (1990–1992) ಆರಂಭವಾಗಿ, ನಂತರ ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ಚರ್ಚ್‌ನಲ್ಲಿ (1992–1995) ಮುಂದುವರಿಯಿತು. ಅವರು ಮಂಗಳೂರಿನ ಸೇಂಟ್ ಜೋಸೆಫ್ ಅಂತರ್-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ನೈತಿಕ ಧರ್ಮಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಹಾಗೂ ರೂಪಣಾಧಿಕಾರಿಯಾಗಿಯೂ (1995–1997) ಸೇವೆ ಸಲ್ಲಿಸಿದ್ದು, 2013 ರವರೆಗೆ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರ ಧಾರ್ಮಿಕ ನಾಯಕತ್ವವು ಪಾಂಗ್ಲಾ/ಶಂಕರಪುರದಲ್ಲಿನ ಸೇಂಟ್ ಜಾನ್ ದಿ ಇವಾಂಜೆಲಿಸ್ಟ್ ಚರ್ಚ್‌ನ ಧರ್ಮಗುರುಗಳಾಗಿ (2010–2017) ಹಾಗೂ ನಂತರ ಕಲ್ಯಾಣಪುರ–ಸಂತೇಕಟ್ಟೆಯ ಮೌಂಟ್ ರೋಸರಿ ಚರ್ಚ್‌ನ ಧರ್ಮಗುರುಗಳಾಗಿ (2017–2022) ಸೇವೆ ಸಲ್ಲಿಸುವ ಅವಧಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಈ ಅವಧಿಯಲ್ಲಿ ಅವರು ಶಿಕ್ಷಣ ಸಂಸ್ಥೆಗಳ ಸಂವಹಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಜೂನ್ 2022 ರಿಂದ ಅವರು ಶಿರ್ವಾದ ಅವರ್ ಲೇಡಿ ಆಫ್ ಹೆಲ್ತ್ ಚರ್ಚ್‌ನ ಧರ್ಮಗುರುಗಳಾಗಿ ಹಾಗೂ ಡೋನ್ ಬೋಸ್ಕೊ ಮತ್ತು ಸೇಂಟ್ ಮೇರೀಸ್ ಶಿಕ್ಷಣ ಸಂಸ್ಥೆಗಳ ಸಂವಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ಯಾರಿಷ್ ಸೇವೆಯ ಜೊತೆಗೆ, ಫಾ. ಲೆಸ್ಲಿ ಅವರು ಧರ್ಮಪ್ರಾಂತ್ಯದ ಆಡಳಿತ ಮತ್ತು ನಿರ್ವಹಣೆಯಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಯಾಜಕರ ಮಂಡಳಿಯ ಕಾರ್ಯದರ್ಶಿಯಾಗಿ (2022–2025) ಸೇವೆ ಸಲ್ಲಿಸಿದ್ದು, ಪ್ರಸ್ತುತ ಶಿರ್ವಾ ಡೀನರಿಯ ವಿಕಾರ್ ಫೋರೇನ್, ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ನ್ಯಾಯಮಂಡಳಿಯ ವಕೀಲರು ಹಾಗೂ ಸಲಹೆಗಾರರ ಮಹಾವಿದ್ಯಾಲಯದ ಸದಸ್ಯರಾಗಿ (2023 ರಿಂದ ಇಂದಿನವರೆಗೆ) ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಸೇವೆ ನೀಡುತ್ತಿರುವ ಶಿರ್ವ ಸಾವುದು ಅಮ್ಮನ ಚರ್ಚಿನಲ್ಲಿ ಬಿಷಪ್ ಆಗಿ ನೇಮಕಗೊಂಡ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಇವರಿಗೆ ಚರ್ಚಿನ ಭಕ್ತಾದಿಗಳ ವತಿಯಿಂದ ಸ್ವಾಗತ ನೀಡಲಾಯಿತು. ತದನಂತರ ದೇವಾಲಯದಲ್ಲಿ ಬಿಷಪ್ ಡಾ. ಐಜಾಕ್ ಲೋಬೋ ಇವರ ನೇತೃತ್ವದಲ್ಲಿ ಪ್ರಾರ್ಥನಾ ವಿಧಿ ನೆರವೇರಿತು ಬಿಷಪ್ ರವರು ಶುಭ ಶಾಂಸನೆ ಗೈದರು ಕೊನೆಯಲ್ಲಿ ನೂತನ ಬಿಷಪ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ತಮ್ಮ ಅನಿಸಿಕೆಗಳನ್ನು ಸಭೆಯಲ್ಲಿ ಹಂಚಿದರು ಹಾಗೂ ಎಲ್ಲಾ ಕ್ರೈಸ್ತ ಬಾಂಧವರ ಪ್ರಾರ್ಥನೆಯನ್ನು ಕೋರಿದರು ಈ ಸರಳ ಸಮಾರಂಭದಲ್ಲಿ ಚರ್ಚಿನ ಉಪಾಧ್ಯಕ್ಷರಾದ ಜುಲಿಯನ್ ರೊಡ್ರಿಗಸ್,ಕಾರ್ಯದರ್ಶಿಯಾದ ಗಿಲ್ಬರ್ಟ್ ಪಿಂಟೋ,ಆಯೋಗದ ಸಂಚಾಲಕಿ ಯಾದ ಶಾಲಿನಿ ಕೋರ್ಡ, ಧರ್ಮಬಗಿನಿಯರು ಉಡುಪಿ ಧರ್ಮ ಪ್ರಾಂತ್ಯದ ಧರ್ಮಗುರುಗಳು ಹಾಗೂ ಶಿರ್ವಾ ಚರ್ಚಿನ ಭಕ್ತಾದಿಗಳು ಹಾಜರಿದ್ದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







