ಶಿರ್ವ, ಫೆಬ್ರವರಿ 4: ಶಿರ್ವದಲ್ಲಿರುವ ಆರೋಗ್ಯ ಮಾತೆಯ ದೇವಾಲಯದಲ್ಲಿ ಈಸ್ಟರ್ ಸಂಭ್ರಮವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಶುಭ ಶನಿವಾರದಂದು ಸಂಜೆ 7 ಗಂಟೆಗೆ ನಡೆದ ಪವಿತ್ರ ಬಲಿ ಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ನಿಯೋಜಿತ ಬಿಷಪ್ ಮೊನ್ಸಿಂಜೋರ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ನೆರವೇರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪವಿತ್ರ ಬೆಂಕಿಯನ್ನು ಆಶೀರ್ವದಿಸಿ, ಅದರಿಂದ ಈಸ್ಟರ್ ಕ್ಯಾಂಡಲನ್ನು ಪ್ರಜ್ವಲಿಸಲಾಯಿತು. ನಂತರ ಆ ಕ್ಯಾಂಡಲನ್ನು ದೇವಾಲಯದ ಒಳಗೆ ತೆಗೆದುಕೊಂಡು ಹೋಗಿ, ಇಡೀ ದೇವಾಲಯವನ್ನು ದೀಪಾಲಂಕಾರದಿಂದ ಪ್ರಜ್ವಲಿಸಲಾಯಿತು.
ಸಹಾಯಕ ಧರ್ಮಗುರುಗಳಾದ ಫಾ. ಅನಿಲ್ ರೊಡ್ರಿಗಸ್ ಅವರು ದೇವರ ವಾಕ್ಯದ ಪ್ರವಚನವನ್ನು ನೀಡಿದರು. ಬಲಿ ಪೂಜೆಯ ಸಂದರ್ಭದಲ್ಲಿ ಪವಿತ್ರ ನೀರನ್ನು ಆಶೀರ್ವದಿಸಿ ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಲಾಯಿತು.
ಡಾನ್ ಬೋಸ್ಕೊ ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲರಾದ ಫಾ. ರೋಲ್ವಿನ್ ಅರಾನ್ಹಾ, ಸಹಾಯಕ ಧರ್ಮಗುರುಗಳಾದ ಫಾ. ರೋಷನ್ ಡಿಸೋಜಾ (ಎಸ್ಡಿಬಿ), ಫಾ. ರಾಯಲ್ ಮಿನೇಜಸ್ (ಎಸ್ಡಿಬಿ), ಫಾ. ಮೆಲ್ವಿನ್ ಮಿನೇಜಸ್ (ಪೊಲೋಟಿನ್) ಅವರು ಬಲಿ ಪೂಜೆಯಲ್ಲಿ ಭಾಗವಹಿಸಿದರು. 32 ವಾರ್ಡ್ಗಳ ಗುರಿಕಾರರು ಕಾಣಿಕೆಗಳನ್ನು ಅರ್ಪಿಸಿದರು.
ಯೇಸು ಕ್ರಿಸ್ತನು ಶಿಲುಬೆಗೇರಿದ ಮೂರನೇ ದಿನದಂದು ಮರಣವನ್ನು ಗೆದ್ದು ಪುನರುತ್ಥಾನಗೊಂಡ (ಮರಳಿ ಎದ್ದು ಬಂದ) ಪವಿತ್ರ ದಿನವನ್ನು ಇಂದು ನಾಡಿನಾದ್ಯಂತ ‘ಈಸ್ಟರ್ ಭಾನುವಾರ’ (Easter Sunday) ಎಂದು ಅತ್ಯಂತ ಸಡಗರ ಹಾಗೂ ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ. ಕತ್ತಲಿನ ಮೇಲೆ ಬೆಳಕಿನ ವಿಜಯ, ಅಧರ್ಮದ ಮೇಲೆ ಧರ್ಮದ ಜಯ ಹಾಗೂ ಸಾವಿನ ಮೇಲೆ ಜೀವದ ವಿಜಯವನ್ನು ಈ ಹಬ್ಬವು ಜಗತ್ತಿಗೆ ಸಾರುತ್ತದೆ.
ಈ ಸಂದರ್ಭದಲ್ಲಿ ಶಿರ್ವ ನೇಟಿವಿಟಿ ಕಾನ್ವೆಂಟ್ ಮತ್ತು ಆಕ್ಸಿಲಿಯಂ ಕಾನ್ವೆಂಟ್ನ ಧರ್ಮಭಗಿನಿಯರು, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜುಲಿಯನ್ ರೊಡ್ರಿಗಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಆಯೋಗದ ಸಂಚಾಲಕಿಯಾದ ಶಾಲಿನಿ ಕೋರ್ಡ, ಉಡುಪಿ ಪ್ರದೇಶದ ಕಥೋಲಿಕ್ ಸಭೆಯ ಅಧ್ಯಕ್ಷರಾದ ಮೆಲ್ವಿನ್ ಅರಾನ್ಹ ಹಾಗೂ ಮಾಜಿ ಉಪಾಧ್ಯಕ್ಷರಾದ ನಾರ್ಬರ್ಟ್ ಮಚಾದೋ, ಇರ್ವಿನ್ ಡಿಸೋಜಾ, ವಿಲ್ಸನ್ ಡಿಸೋಜಾ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದರು.
ಬಲಿ ಪೂಜೆಯ ಅಂತ್ಯದಲ್ಲಿಉಡುಪಿ ಧರ್ಮಪ್ರಾಂತ್ಯದ ನಿಯೋಜಿತ ಬಿಷಪ್ ಮೊನ್ಸಿಂಜೋರ್ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡು, ಈಸ್ಟರ್ ಸಂದೇಶವನ್ನು ನೀಡಿದರು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನುb ಅರ್ಪಿಸಿದರು.
ನಾಡಿನ ಹಾಗೂ ಹೊರನಾಡಿನ ಸಮಸ್ತ ಜನತೆಗೆ ಈಸ್ಟರ್ ಹಬ್ಬದ ಹಾರ್ದಿಕ ಶುಭಾಶಯಗಳು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







